ಕೆಲಸದ ಸ್ಥಳಗಳಲ್ಲಿ ಮಾನಸಿಕ ಒತ್ತಡ | ಪರಿಹಾರಕ್ಕೆ ಕಾರ್ಪೊರೇಟ್ ವಲಯದ ಗಮನ ಅಗತ್ಯ ಎಂದ ಉದ್ಯೋಗಿಗಳು : ಸಮೀಕ್ಷಾ ವರದಿ

Update: 2024-09-28 15:08 GMT

ಸಾಂದರ್ಭಿಕ ಚಿತ್ರ

ಮುಂಬೈ : ಕೆಲಸದ ಸ್ಥಳಗಳಲ್ಲಿನ ಮಾನಸಿಕ ಆರೋಗ್ಯ ಸಮಸ್ಯೆಯ ಕಡೆ ಕಾರ್ಪೊರೇಟ್ ವಲಯವೂ ಗಮನ ಹರಿಸುತ್ತಿರುವಾಗಲೇ, ಒಟ್ಟಾರೆ ಮಾನಸಿಕ ಸ್ವಾಸ್ಥ್ಯವನ್ನು ಸುಧಾರಿಸಲು ಉದ್ಯೋಗದಾತ ಸಂಸ್ಥೆಗಳೇ ಇನ್ನೂ ಹೆಚ್ಚು ಕೆಲಸ ಮಾಡಬಹುದು ಎಂದು ಬಹುತೇಕ ಉದ್ಯೋಗಿಗಳು ಅಭಿಪ್ರಾಯಪಟ್ಟಿದ್ದಾರೆ ಎಂಬ ಸಂಗತಿ ಶನಿವಾರ ಬಿಡುಗಡೆಗೊಂಡಿರುವ ವರದಿಯೊಂದರಲ್ಲಿ ಬಹಿರಂಗಗೊಂಡಿದೆ.

ಮಾನವ ಸಂಪನ್ಮೂಲ ಮತ್ತು ಸಿಬ್ಬಂದಿ ಪರಿಹಾರ ಪೂರೈಕೆ ಸಂಸ್ಥೆ ಜೀನಿಯಸ್ ಕನ್ಸಲ್ಟೆಂಟ್ಸ್ ವರದಿಯ ಪ್ರಕಾರ, ನಮ್ಮ ಸಂಸ್ಥೆಗಳೇ ಮಾನಸಿಕ ಆರೋಗ್ಯ ಸಮಸ್ಯೆ ಮತ್ತು ಮಾನಸಿಕ ಸ್ವಸ್ಥತೆ ಕುರಿತು ಹೆಚ್ಚು ಗಮನ ಹರಿಸಬಹುದು ಎಂದು ಸಮೀಕ್ಷೆಯಲ್ಲಿ ಭಾಗಿಯಾಗಿದ್ದ ಶೇ. 79ಕ್ಕೂ ಹೆಚ್ಚು ಮಂದಿ ಉದ್ಯೋಗಿಗಳು ಅಭಿಪ್ರಾಯ ಪಟ್ಟಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಜೀನಿಯಸ್ ಕನ್ಸಲ್ಟೆಂಟ್ಸ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಆರ್.ಪಿ.ಯಾದವ್, “ಉದ್ಯೋಗಿಗಳ ಮಾನಸಿಕ ಸ್ವಾಸ್ಥ್ಯ ಕೇವಲ ಟ್ರೆಂಡ್ ಮಾತ್ರವಲ್ಲದೆ, ಸಂಘಟನಾತ್ಮಕ ಯಶಸ್ಸಿಗೆ ಬಹು ಮುಖ್ಯ ಸಂಗತಿ ಎಂಬುದನ್ನು ನಾವು ಗುರುತಿಸಬೇಕಿದೆ. ಗಮನಾರ್ಹ ಸಂಖ್ಯೆಯ ಉದ್ಯೋಗಿಗಳು ತಮ್ಮ ಕೆಲಸದ ಸ್ಥಳಗಳಲ್ಲಿ ಆತಂಕ ಹಾಗೂ ಭಾರಿ ಒತ್ತಡವನ್ನು ಎದುರಿಸುತ್ತಿರುವುದು ದತ್ತಾಂಶಗಳಿಂದ ಬಯಲಾಗಿದೆ. ಮಾನಸಿಕ ಆರೋಗ್ಯ ಮತ್ತು ಕೆಲಸ-ಜೀವನದ ಸಮತೋಲನ ಸಾಧಿಸಲು ಸಂಸ್ಥೆಗಳು ನೆರವಿನ ವಾತಾವರಣ ಸೃಷ್ಟಿಸಲು ಸಕಾರಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ” ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಆಗಸ್ಟ್ 5ರಿಂದ ಸೆಪ್ಟೆಂಬರ್ 2ರ ನಡುವೆ ವಿವಿಧ ವಲಯಗಳಲ್ಲಿ ದುಡಿಯುತ್ತಿರುವ 1,783 ಉದ್ಯೋಗಿಗಳನ್ನು ಸಂಪರ್ಕಿಸಿ ನಡೆಸಿರುವ ಸಮೀಕ್ಷೆಯನ್ನು ಆಧರಿಸಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ.

ಸೋಮವಾರ ಕೆಲಸಕ್ಕೆ ಮರಳಬೇಕು ಎಂಬ ಆತಂಕ ಮತ್ತು ಗಾಬರಿಯು ರವಿವಾರ ಸಂಜೆಯಿಂದಲೇ ಪ್ರಾರಂಭಗೊಳ್ಳುತ್ತದೆ ಎಂದು ಶೇ. 45ಕ್ಕೂ ಹೆಚ್ಚು ಮಂದಿ ಉದ್ಯೋಗಿಗಳು ಅಭಿಪ್ರಾಯ ಪಟ್ಟಿದ್ದರೆ, ಶೇ. 13ರಷ್ಟು ಮಂದಿ ಮಿಶ್ರಂ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಇದಲ್ಲದೆ, ಶೇ. 78ರಷ್ಟು ಉದ್ಯೋಗಿಗಳು ಕಠಿಣ ಉದ್ಯೋಗ ವಾತಾವರಣ, ಭಾರಿ ಒತ್ತಡ ಹಾಗೂ ಆಡಳಿತ ಮಂಡಳಿ ಮತ್ತು ಸಹೋದ್ಯೋಗಿಗಳಿಂದ ವಿನಯದ ವರ್ತನೆಯ ಅಪೇಕ್ಷೆ ಕುರಿತು ವರದಿ ಮಾಡಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಶೇ. 17ರಷ್ಟು ಮಂದಿ ಮಾತ್ರ ಈ ಮೌಲ್ಯಮಾಪನಕ್ಕೆ ಅಸಮ್ಮತಿ ವ್ಯಕ್ತಪಡಿಸಿದ್ದು, ಸಂಘಟನೆಗಳೊಳಗೆ ಹೆಚ್ಚು ನೆರವು ಸಂಸ್ಕೃತಿಯ ಅಗತ್ಯವನ್ನು ಒತ್ತಿ ಹೇಳಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಈ ನಡುವೆ, ಶೇ. 66ರಷ್ಟು ಮಂದಿ ತಮ್ಮ ಅತಿ ಹೊರೆಯ ಕೆಲಸದ ಚೌಕಟ್ಟಿನ ಕುರಿತು ಅಳಲು ತೋಡಿಕೊಂಡಿದ್ದಾರೆ. ಇದರಿಂದ ಕೆಲಸ-ಜೀವನದ ನಡುವಿನ ಸಮತೋಲನವು ವಿಪರೀತವಾಗಿ ಅಡಚಣೆಗೊಳಗಾಗಿದೆ ಎಂದು ಅವರು ಹೇಳಿದ್ದಾರೆ.

ಗಮನಾರ್ಹ ಪ್ರಮಾಣದ ಸಿಬ್ಬಂದಿಗಳು ತಮ್ಮ ವೃತ್ತಿಪರ ಮತ್ತು ವೈಯಕ್ತಿಕ ಬದುಕನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಹೋರಾಡುತ್ತಿದ್ದಾರೆ ಎಂಬುದು ಈ ಆತಂಕಕಾರಿ ಶೇಕಡಾವಾರು ಪ್ರಮಾಣವು ಹೇಳುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News