ಪುಣೆ ಕಾರು ಅಪಘಾತ ಪ್ರಕರಣ: ಅಪ್ರಾಪ್ತ ಆರೋಪಿಯ ರಕ್ತದ ಮಾದರಿ ಬದಲಾಯಿಸಿದ ಇಬ್ಬರು ವೈದ್ಯರ ಬಂಧನ

Update: 2024-05-27 06:12 GMT

PC : PTI 

ಪುಣೆ: ಪುಣೆಯಲ್ಲಿ ಇಬ್ಬರನ್ನು ಬಲಿ ಪಡೆದ ಪೋರ್ಶೆ ಕಾರನ್ನು ಚಲಾಯಿಸುತ್ತಿದ್ದ ಆರೋಪ ಎದುರಿಸುತ್ತಿರುವ ಅಪ್ರಾಪ್ತ ಬಾಲಕನ ರಕ್ತದ ಮಾದರಿಯನ್ನು ಬದಲಾಯಿಸಿದ ಆರೋಪದ ಮೇಲೆ ಪುಣೆ ಪೊಲೀಸರು ಇಲ್ಲಿನ ಸರ್ಕಾರಿ ಸಸ್ಸೋನ್‌ ಜನರಲ್‌ ಆಸ್ಪತ್ರೆಯ ಇಬ್ಬರು ಹಿರಿಯ ವೈದ್ಯರನ್ನು ಬಂಧಿಸಿದ್ದಾರೆ. ಮದ್ಯದ ಅಮಲಿನಲ್ಲಿ ಮೇ 19 ರಂದು ಬಾಲಕ ವಾಹನ ಚಲಾಯಿಸಿ ಇಬ್ಬರ ಸಾವು ಸಂಭವಿಸಿತ್ತು.

ಆಸ್ಪತ್ರೆಯ ಫೊರೆನ್ಸಿಕ್‌ ವಿಭಾಗದ ಮುಖ್ಯಸ್ಥ ಡಾ ಅಜಯ್‌ ತವಾರೆ, ಮತ್ತು ಡಾ ಶ್ರೀಹರಿ ಹರ್ನೋಲ್‌ ಬಂಧಿತ ವೈದ್ಯರು ಎಂದು ಪುಣೆ ಪೊಲೀಸ್‌ ಆಯುಕ್ತ ಅಮಿತೇಶ್‌ ಕುಮಾರ್‌ ತಿಳಿಸಿದ್ದಾರೆ.

ರಕ್ತದ ಮಾದರಿ ಸಂಗ್ರಹಿಸಲು ವಿಳಂಬವಾಗಿದ್ದನ್ನು ಪೊಲೀಸ್‌ ಆಯುಕ್ತರು ಒಪ್ಪಿಕೊಂಡಿದ್ದಾರೆ. ರಕ್ತದಲ್ಲಿ ಮದ್ಯದ ಅಂಶವನ್ನು ಪತ್ತೆಹಚ್ಚಲು ಪಡೆಯಲಾಗಿದ್ದ ಆರೋಪಿ ಅಪ್ರಾಪ್ತ ಬಾಲಕನ ರಕ್ತದ ಮಾದರಿಯನ್ನು ಈ ಇಬ್ಬರು ವೈದ್ಯರು ಬದಲಿಸಿದ್ದು ಕಂಡುಬಂದಿತ್ತು. ಪುಣೆ ನಗರ ಪೊಲೀಸರು ಮುಂಜಾಗರೂಕತಾ ಕ್ರಮವಾಗಿ ಬಾಲಕನ ರಕ್ತದ ಮಾದರಿಯನ್ನು ಮೇ 19ರ ಸಂಜೆ ಮತ್ತೆ ಸಂಗ್ರಹಿಸಿದ್ದರು ಎಂದು ಪೊಲೀಸ್‌ ಆಯುಕ್ತರು ತಿಳಿಸಿದ್ದಾರೆ.

ಆರಂಭದಲ್ಲಿ ಆರೋಪಿ ಬಾಲಕನಿಗೆ ನ್ಯಾಯಾಲಯ ಅಪಘಾತಗಳ ಬಗ್ಗೆ ಪ್ರಬಂಧ ಬರೆಯಲು ಹಾಗೂ ಸಂಚಾರ ನಿಯಮಗಳನ್ನು ಅಧ್ಯಯನ ನಡೆಸಬೇಕು ಮುಂತಾದ ಷರತ್ತುಗಳನ್ನು ವಿಧಿಸಿ ಜಾಮೀನು ನೀಡಿದ್ದರೂ ಪ್ರಕರಣ ವಿವಾದಕ್ಕೀಡಾಗುತ್ತಿದ್ದಂತೆ ಆತನನ್ನು ಬಾಲಾಪರಾಧಿಗಳ ನ್ಯಾಯ ಮಂಡಳಿ ಜೂನ್‌ 5ರ ತನಕ ಅಬ್ಸರ್ವೇಶನ್‌ ಹೋಮ್‌ಗೆ ಕಳಿಸಿದೆ.

ಘಟನೆ ಸಂಬಂಧ ರಿಯಲ್‌ ಎಸ್ಟೇಟ್‌ ಉದ್ಯಮಿಯಾಗಿರುವ ಬಾಲಕನ ತಂದೆ ಮತ್ತು ಅಜ್ಜನನ್ನು ಬಂಧಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News