ಪಂಜಾಬ್ : ಅರ್ಜುನ ಪ್ರಶಸ್ತಿ ಪುರಸ್ಕೃತ ಡಿಎಸ್ಪಿ ಹತ್ಯೆ ಪ್ರಕರಣದಲ್ಲಿ ಆಟೋಚಾಲಕನ ಬಂಧನ
ಜಲಂಧರ್: ಅರ್ಜುನ ಪ್ರಶಸ್ತಿ ಪುರಸ್ಕೃತ ಡಿಎಸ್ಪಿ ದಲ್ಬೀರ್ ಸಿಂಗ್ ಡಿಯೋಲ್ (54) ಅವರ ಹತ್ಯೆ ಪ್ರಕರಣದಲ್ಲಿ ಆಟೋಚಾಲಕನೋರ್ವನ್ನು ಇಲ್ಲಿಯ ಪೋಲಿಸರು ಬುಧವಾರ ಬಂಧಿಸಿದ್ದಾರೆ.
ವೇಟ್ಲಿಫ್ಟರ್ ಆಗಿದ್ದ ಸಿಂಗ್ 1999ರ ಏಶ್ಯನ್ ಗೇಮ್ಸ್ನಲ್ಲಿ ರಜತ ಪದಕವನ್ನು ಗೆದ್ದಿದ್ದು, 2000ರಲ್ಲಿ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದರು. ಜ.1ರಂದು ಬೆಳಿಗ್ಗೆ ಜಲಂಧರ್ ಪಟ್ಟಣದ ಹೊರವಲಯದ ಬಸ್ತಿ ಬಾವಾ ಖೇಲ್ನಲ್ಲಿಯ ಕಾಲುವೆಯಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು. ತಲೆಗೆ ಗುಂಡಿನ ಗಾಯ ಸೇರಿದಂತೆ ಶರೀರದಲ್ಲಿ ಹಲವಾರು ಗಾಯಗಳ ಗುರುತುಗಳಿದ್ದವು.
ಸಿಂಗ್ ಜಲಂಧರ್ ನಲ್ಲಿಯ ಪಂಜಾಬಿನ ಸಶಸ್ತ್ರ ಮೀಸಲು ಪಡೆಯ ಕೇಂದ್ರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆರಂಭದಲ್ಲಿ ಪೋಲಿಸರು ಇದೊಂದು ಹಿಟ್ ಆ್ಯಂಡ್ ರನ್ ಪ್ರಕರಣ ಎಂದು ಭಾವಿಸಿದ್ದರು. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಅವರ ತಲೆಯ ಹಿಂಭಾಗದಲ್ಲಿ ಗುಂಡಿನ ಗಾಯ ಪತ್ತೆಯಾಗಿತ್ತು. ಅವರಿಗೆ ಅತ್ಯಂತ ಹತ್ತಿರದಿಂದ ಗುಂಡಿಕ್ಕಲಾಗಿದೆ ಎಂದು ವರದಿಯು ತಿಳಿಸಿತ್ತು.
ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಡಿ.31ರಂದು ರಾತ್ರಿ ಸಿಂಗ್ ಪ್ರಯಾಣಿಸಿದ್ದ ಆಟೋದ ಚಾಲಕನನ್ನು ಪೋಲಿಸರು ಬಂಧಿಸಿದ್ದಾರೆ. ಸಿಂಗ್ ಅವರ ಸರ್ವಿಸ್ ರಿವಾಲ್ವರ್ನಿಂದಲೇ ಅವರಿಗೆ ಗುಂಡು ಹಾರಿಸಲಾಗಿದ್ದು, ಅದನ್ನಿನ್ನೂ ಪೋಲಿಸರು ವಶಪಡಿಸಿಕೊಳ್ಳಬೇಕಿದೆ.
ವಿವರಗಳನ್ನು ನೀಡಲು ನಿರಾಕರಿಸಿದ ಡಿಸಿಪಿ ಹರ್ವಿಂದರ್ ಸಿಂಗ್ ವಿರ್ಕ್ ಅವರು,ತನಿಖೆ ಪ್ರಗತಿಯಲ್ಲಿದೆ. ಈ ಹಂತದಲ್ಲಿ ಹೆಚ್ಚಿನ ವಿವರಗಳನ್ನು ಬಹಿರಂಗಗೊಳಿಸಿದರೆ ತನಿಖೆಗೆ ಅಡ್ಡಿಯುಂಟಾಗುತ್ತದೆ ಎಂದು ಹೇಳಿದರು.