ಪಂಜಾಬ್: ರಸ್ತೆ ಅವಘಡಗಳಲ್ಲಿ ಗಾಯಾಳುಗಳಿಗಿಂತ ಮೃತಪಟ್ಟವರೇ ಅಧಿಕ : NRCB ವರದಿ
ಚಂಡೀಗಢ: 2021 ಹಾಗೂ 2022ರಲ್ಲಿ ಪಂಜಾಬಿನಲ್ಲಿ ಸಂಭವಿಸಿದ ರಸ್ತೆ ಅವಘಡಗಳಲ್ಲಿ ಗಾಯಗೊಂಡವರಿಗಿಂತಲೂ ಮೃತಪಟ್ಟವರ ಸಂಖ್ಯೆಯೇ ಅಧಿಕವೆಂದು ರಾಷ್ಟ್ರೀಯ ಕ್ರಿಮಿನಲ್ ದಾಖಲೆಗಳ ಬ್ಯೂರೋ (NCRB) ವರದಿ ಮಾಡಿದೆ.
ಆದರೆ ನೆರೆಯ ರಾಜ್ಯವಾದ ಹರ್ಯಾಣದಲ್ಲಿ ಅಪಘಾತಗಳಲ್ಲಿ ಸಾವನ್ನಪ್ಪಿದವರಿಗಿಂತ ಗಾಯಾಳುಗಳು ಅಧಿಕ ಸಂಖ್ಯೆಯಲ್ಲಿದ್ದಾರೆಂದು ವರದಿ ತಿಳಿಸಿದೆ.
2022ರಲ್ಲಿ ಪಂಜಾಬಿನಲ್ಲಿ 6,122 ರಸ್ತೆ ಅಪಘಾತಗಳು ಸಂಭವಿಸಿವೆ ಹಾಗೂ 3,372 ಮಂದಿ ಗಾಯಗೊಂಡಿದ್ದಾರೆ. ಅದರ ಹಿಂದಿನ ವರ್ಷ 6097 ರಸ್ತೆ ಅಪಘಾತಗಳು ಸಂಭವಿಸಿದ್ದು 4,516 ಸಾವುಗಳು ಹಂಭವಿಸಿವೆ ಹಾಗೂ 3,034 ಮಂದಿ ಗಾಯಗೊಂಡಿದ್ದಾರೆ. 2021ರಲ್ಲಿ ಹರ್ಯಾಣದಲ್ಲಿ 10,049 ರಸ್ತೆ ಅಪಘಾತದ ಪ್ರಕರಣಗಳು ವರದಿಯಾಗಿವೆ. 2022ರಲ್ಲಿ ಆ ರಾಜ್ಯದಲ್ಲಿ ರಸ್ತೆ ಅವಘಡಗಳ ಸಂಖ್ಯೆ 10,654ಕ್ಕೆ ಏರಿದೆ.
2021ರಲ್ಲಿ ಹರ್ಯಾಣದಲ್ಲಿ 4,983 ಮಂದಿ ಸಾವನ್ನಪ್ಪಿದ್ದರೆ, 2022ರಲ್ಲಿ ಆ ಸಂಖ್ಯೆ 5,228ಕ್ಕೇರಿದೆ. ಈ ಎರಡು ವರ್ಷಗಳಲ್ಲಿ ಅವಘಡಗಳಲ್ಲಿ ಗಾಯಗೊಂಡವರ ಸಂಖ್ಯೆ ಕ್ರಮವಾಗಿ 7,972 ಹಾಗೂ 8,353 ಆಗಿದೆ.
NCRB ದತ್ತಾಂಶಗಳ ಪ್ರಕಾರ 2022ರಲ್ಲಿ ಹರ್ಯಾಣದಲ್ಲಿ ಎಸ್ಯುವಿ, ಕಾರು ಮತ್ತಿತರ ಲಘು ಮೋಟಾರುವಾಹನಗಳನ್ನು ಒಳಗೊಂಡ ರಸ್ತೆ ಅವಘಡಗಳಲ್ಲಿ 660 ಮಂದಿ ಸಾವನ್ನಪ್ಪಿದ್ದಾರೆ ಹಾಗೂ 1,398 ಮಂದಿ ಗಾಯಗೊಂಡಿದ್ದಾರೆ.
ಅದೇ ವರ್ಷ ಪಂಜಾಬಿನಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ 1,101 ಮಂದಿ ಮೃತಪಟ್ಟಿದ್ದಾರೆ ಹಾಗೂ 861 ಮಂದಿ ಗಾಯಗೊಂಡಿದ್ದಾರೆ. ಈ ಎರಡೂ ರಾಜ್ಯಗಳಲ್ಲಿ ದ್ವಿಚಕ್ರ ವಾಹನಗಳ ಸವಾರರಿಂದಾಗಿ ಸಂಭವಿಸಿದ ಗಾಯಗಳು ಹಾಗೂ ಸಾವಿನ ಸಂಖ್ಯೆ ತುಂಬಾ ಅಧಿಕವಾಗಿದೆ ಎಂದು NCRB ವರದಿ ತಿಳಿಸಿದೆ.
2022ರಲ್ಲಿ 2,182 ದ್ವಿಚಕ್ರವಾಹನ ಸವಾರರು ಸಾವಿಗೀಡಾದರೆ, 3,420 ಮಂದಿ ಗಾಯಗೊಂಡಿದ್ದಾರೆ. ಪಂಜಾಬಿನಲ್ಲಿ ಅದೇ ವರ್ಷ 2,099 ಮಂದಿ ದ್ವಿಚಕ್ರವಾಹನ ಸವಾರರು ಮೃತಪಟ್ಟಿದ್ದಾರೆ ಹಾಗೂ 112 ಮಂದಿ ಗಾಯಗೊಂಡಿದ್ದಾರೆ.
2022ರಲ್ಲಿ 1,164 ಮಂದಿ ಪಾದಚಾರಿಗಳು ಅವಘಡಗಳಲ್ಲಿ ಸಾವನ್ನಪ್ಪಿದರೆ, 1,663 ಮಂದಿ ಗಾಯಗೊಂಡಿದ್ದಾರೆ. ಅದೇ ವರ್ಷ ಪಂಜಾಬಿನಲ್ಲಿ 609 ಮಂದಿ ಸಾವನ್ನಪ್ಪಿದ್ದಾರೆ ಹಾಗೂ 241 ಮಂದಿ ಗಾಯಗೊಂಡಿದ್ದಾರೆ.
ಈ ಮಧ್ಯೆ ರಾಜ್ಯದಲ್ಲಿ ರಸ್ತೆ ಅವಘಡಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿರುವುದನ್ನು ಗಣನೆಗೆ ತೆಗೆದುಕೊಂಡಿರುವ ಪಂಜಾಬ್ ಸರಕಾರವು ಪ್ರತಿವರ್ಷ ಗಣನೀಯ ಸಂಖ್ಯೆಯಲ್ಲಿ ರಸ್ತೆ ಅವಘಡಗಳು ಸಂಭವಿಸಿರುವ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ರಸ್ತೆ ಸುರಕ್ಷತಾ ಪಡೆಯನ್ನು ನಿಯೋಜಿಸಲು ನಿರ್ಧರಿಸಿದೆ.
ಹರ್ಯಾಣ ಕೂಡಾ ರಾಜ್ಯದ ರಸ್ತೆಗಳಲ್ಲಿ ಪ್ರಾಣಹಾನಿಯಾಗುವುದನ್ನು ತಪ್ಪಿಸಲು ಸರಣಿ ಯೋಜನೆಗಳನ್ನು ಜಾರಿಗೊಳಿಸಿದೆಯೆಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಸಂಜಯ್ ಕೌಶಾಲ್ ತಿಳಿಸಿದ್ದಾರೆ.