ಕುಶಲಕರ್ಮಿಗಳು, ಕಾರ್ಮಿಕರೊಂದಿಗೆ ಬೆಳಕಿನ ಹಬ್ಬ ಆಚರಿಸಿದ ರಾಹುಲ್‌ ಗಾಂಧಿ

Update: 2024-11-01 13:20 GMT

 ರಾಹುಲ್ ಗಾಂಧಿ | PC : X \ @RahulGandhi

ಹೊಸದಿಲ್ಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ದೀಪಾವಳಿಯನ್ನು ವಿಶೇಷ ರೀತಿಯಲ್ಲಿ ಆಚರಿಸಿದ್ದು, ಹಬ್ಬದ ಪೂರ್ವಭಾವಿಯಾಗಿ ಕುಶಲಕರ್ಮಿಗಳು ಮತ್ತು ವರ್ಣಚಿತ್ರಕಾರ ಕುಟುಂಬಗಳೊಂದಿಗೆ ಕೆಲವು ಕ್ಷಣಗಳನ್ನು ಹಂಚಿಕೊಂಡಿದ್ದಾರೆ.

ಈ ಕುರಿತ ವಿಡಿಯೋವನ್ನು ರಾಹುಲ್‌ ಗಾಂಧಿ ಅವರು ಶುಕ್ರವಾರ ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಲ್ಲಿ ‘ಯಾರ ದುಡಿಮೆ ಭಾರತವನ್ನು ಬೆಳಗಿಸುತ್ತದೆಯೋ ಅವರೊಂದಿಗೆ ದೀಪಾವಳಿ’ ಎಂಬ ಶೀರ್ಷಿಕೆಯೊಂದಿಗೆ ಬಿಡುಗಡೆ ಮಾಡಿದ್ದಾರೆ. ಅವರ ಜೊತೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪುತ್ರ ರೈಹಾನ್ ವಾದ್ರಾ ಕೂಡಾ ಕಾಣಿಸಿಕೊಂಡಿದ್ದಾರೆ.

ತಮ್ಮ ಸರ್ಕಾರಿ ನಿವಾಸದಲ್ಲಿ ನಡೆಯುತ್ತಿರುವ ನಿರ್ವಹಣಾ ಕೆಲಸದಲ್ಲಿ ಕಾರ್ಮಿಕರೊಂದಿಗೆ ಕೆಲವು ಕ್ಷಣಗಳನ್ನು ಕಳೆದ ರಾಹುಲ್‌ ಗಾಂಧಿ ಅವರು, ಮೇಲ್ಛಾವಣಿಯ ರಿಪೇರಿ ಮಾಡುವ ಕಾರ್ಮಿಕರೊಂದಿಗೆ ಗೋಡೆ ಪಟ್ಟಿ ಬಳಿಯುವುದು ವಿಡಿಯೋದಲ್ಲಿ ಕಂಡು ಬಂದಿದೆ.

ಕುಶಲಕರ್ಮಿಗಳು ಮತ್ತು ವರ್ಣಚಿತ್ರಕಾರರೊಂದಿಗೆ ಕಳೆದ ಕ್ಷಣಗಳನ್ನು ಹಂಚಿಕೊಂಡ ಅವರು, ಇತರರಿಗೆ ಸಂತೋಷವನ್ನು ತರುವಲ್ಲಿ ಕಾರ್ಮಿಕರು ನೀಡಿದ ಕೊಡುಗೆಯನ್ನು ಶ್ಲಾಘಿಸಿದರು.

ಜೀವನೋಪಾಯಕ್ಕಾಗಿ ಕೆಲಸಗಾರರು ಎದುರಿಸುತ್ತಿರುವ ದೈನಂದಿನ ಸವಾಲುಗಳ ಕಡೆಗೆ ಗಮನ ಸೆಳೆದ ಅವರು, “ಈ ಜನರ ಜೀವನದಲ್ಲಿ ಬೆಳಕು ಮತ್ತು ಸಮೃದ್ಧಿಯನ್ನು ತರುವುದು ನಮ್ಮ ಸಾಮೂಹಿಕ ಜವಾಬ್ದಾರಿಯಾಗಿದೆ" ಎಂದು ತಮ್ಮ ಪೋಸ್ಟ್‌ ಒಂದರಲ್ಲಿ ಹೇಳಿದ್ದಾರೆ.

ಮತ್ತೊಂದು ವೀಡಿಯೊದಲ್ಲಿ, ಅವರು ಕುಂಬಾರ ಕುಟುಂಬದೊಂದಿಗೆ ಮಡಕೆ ತಯಾರಿಸುವ ವಿಧಾನವನ್ನೂ ಕೇಳಿ ತಿಳಿದುಕೊಳ್ಳುವುದು ಕಂಡು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News