ರಾಹುಲ್‌ ಗಾಂಧಿ ಪೌರತ್ವ ವಿಚಾರ: ದಿಲ್ಲಿ ಹೈಕೋರ್ಟ್‌ ಕದ ತಟ್ಟಿದ ಸುಬ್ರಮಣಿಯನ್‌ ಸ್ವಾಮಿ

Update: 2024-08-16 17:24 IST
ರಾಹುಲ್‌ ಗಾಂಧಿ ಪೌರತ್ವ ವಿಚಾರ: ದಿಲ್ಲಿ ಹೈಕೋರ್ಟ್‌ ಕದ ತಟ್ಟಿದ ಸುಬ್ರಮಣಿಯನ್‌ ಸ್ವಾಮಿ

ರಾಹುಲ್‌ ಗಾಂಧಿ, ಸುಬ್ರಮಣಿಯನ್‌ ಸ್ವಾಮಿ | PC : PTI

  • whatsapp icon

ಹೊಸದಿಲ್ಲಿ: ಕಾಂಗ್ರೆಸ್‌ ನಾಯಕ ಮತ್ತು ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರ ಭಾರತೀಯ ಪೌರತ್ವವನ್ನು ರದ್ದುಗೊಳಿಸಬೇಕೆಂದು ಕೋರಿ ತಾವು ಸಲ್ಲಿಸಿದ ಮನವಿ ಕುರಿತು ನಿರ್ಧಾರ ಕೈಗೊಳ್ಳುವಂತೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯಕ್ಕೆ ಸೂಚನೆ ನೀಡಬೇಕೆಂದು ಕೋರಿ ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ ಅವರು ದಿಲ್ಲಿ ಹೈಕೋರ್ಟ್‌ ಕದ ತಟ್ಟಿದ್ದಾರೆ.

ಸ್ವಾಮಿ ಅವರು ಈ ಕುರಿತು ಮನವಿಯನ್ನು ಸಚಿವಾಲಯಕ್ಕೆ ಮೊದಲು 2019ರಲ್ಲಿ ಸಲ್ಲಿಸಿದ್ದರೆಂದು ತಿಳಿದು ಬಂದಿದೆ.

ಸ್ವಾಮಿ ಪ್ರಕಾರ ಇಂಗ್ಲೆಂಡ್‌ನಲ್ಲಿ 2003ರಲ್ಲಿ ನೋಂದಣಿಯಾಗಿರುವ ಬ್ಯಾಕ್‌ಆಪ್ಸ್‌ ಲಿಮಿಟೆಡ್‌ ಎಂಬ ಸಂಸ್ಥೆಯ ನಿರ್ದೇಶಕರಲ್ಲೊಬ್ಬರಾಗಿ ಹಾಗೂ ಕಾರ್ಯದರ್ಶಿಯಾಗಿ ರಾಹುಲ್‌ ಇದ್ದಾರೆ. ಈ ಕಂಪನಿಯ ವಾರ್ಷಿಕ ರಿಟರ್ನ್ಸ್‌ ಅನ್ನು ಅಕ್ಟೋಬರ್‌ 10, 2005 ಮತ್ತು ಅಕ್ಟೋಬರ್‌ 31, 2006ರಲ್ಲಿ ಸಲ್ಲಿಸಲಾಗಿತ್ತು ಹಾಗೂ ಅದರಲ್ಲಿ ರಾಹುಲ್‌ ಅವರು ಬ್ರಿಟಿಷ್‌ ಪ್ರಜೆ ಎಂದು ಉಲ್ಲೇಖಿಸಲಾಗಿತ್ತು ಎಂದು ಸ್ವಾಮಿ ಆರೋಪಿಸಿದ್ದಾರೆ.

ಈ ಕಂಪನಿಯನ್ನು ವಿಸರ್ಜಿಸುವ ಕುರಿತಂತೆ ಫೆಬ್ರವರಿ 17, 2009ರಂದು ಸಲ್ಲಿಸಲಾಗಿದ್ದ ಅರ್ಜಿಯಲ್ಲೂ ರಾಹುಲ್‌ ಅವರು ಬ್ರಿಟಿಷ್‌ ಪ್ರಜೆ ಎಂದು ಉಲ್ಲೇಖಿಸಲಾಗಿತ್ತು ಎಂದು ಸ್ವಾಮಿ ಆರೋಪಿಸಿದ್ದಾರೆ.

ಇದು ಸಂವಿಧಾನದ ವಿಧಿ 9 ಹಾಗೂ ಭಾರತೀಯ ಪೌರತ್ವ ಕಾಯಿದೆ, 1955 ಇವುಗಳ ಉಲ್ಲಂಘನೆಯಾಗಿದೆ ಎಂಬುದು ಸ್ವಾಮಿ ಅವರ ವಾದವಾಗಿದೆ.

“ತಮ್ಮ ವಕೀಲ ಸತ್ಯ ಸಭರ್ವಾಲ್‌ ರಾಹುಲ್‌ ಗಾಂಧಿ ಅವರ ವಿರುದ್ಧ ಕ್ರಮಕೈಗೊಳ್ಳಲು ಹಾಗೂ ಅವರ ಭಾರತೀಯ ಪೌರತ್ವವನ್ನೇಕೆ ರದ್ದುಪಡಿಸಬಾರದು ಎಂಬುದಕ್ಕೆ ಕಾರಣನೀಡಲು ಗೃಹ ಸಚಿವಾಲಯ ವಿಫಲವಾಗಿದೆ ಎಂದು ದೂರಿ ಪಿಐಎಲ್‌ ಸಲ್ಲಿಸಿದ್ದಾರೆ,” ಎಂದು ಸ್ವಾಮಿ ಇಂದು ಪೋಸ್ಟ್‌ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News