ಗುಜರಿ ವಸ್ತುಗಳ ಮಾರಾಟದಿಂದ ಸುಮಾರು ರೂ. 66 ಲಕ್ಷ ಗಳಿಸಿದ ರೈಲ್ವೆ ಸಚಿವಾಲಯ
ಹೊಸದಿಲ್ಲಿ: ವಿಶೇಷ ಶುಚಿತ್ವ ಅಭಿಯಾನ 3.0 ಅಡಿ, ಆರಂಭದ ಹದಿಮೂರು ದಿನಗಳಲ್ಲಿ ತನ್ನ ಕಚೇರಿಯಲ್ಲಿನ ಗುಜರಿ ಸಾಮಾನುಗಳ ಮಾರಾಟದಿಂದ ರೂ. 66 ಲಕ್ಷಕ್ಕೂ ಹೆಚ್ಚು ಮೊತ್ತವನ್ನು ರೈಲ್ವೆ ಸಚಿವಾಲಯ ಗಳಿಸಿದೆ ಎಂದು ರವಿವಾರ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕಚೇರಿಯಲ್ಲಿನ ಗುಜರಿ ವಸ್ತುಗಳನ್ನು ವಿಲೇವಾರಿ ಮಾಡಿರುವುದರಿಂದ ರೈಲ್ವೆ ಸಚಿವಾಲಯಕ್ಕೆ 3,97,619 ಚ.ಅಡಿ ಜಾಗ ಉಳಿತಾಯವಾಗಿದ್ದು, ಆ ಜಾಗವನ್ನು ಇನ್ನಿತರ ಉದ್ದೇಶಗಳಿಗೆ ಬಳಸಿಕೊಳ್ಳಬಹುದಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಅಕ್ಟೋಬರ್ 1ರಿಂದ ಅಕ್ಟೋಬರ್ 31ರವರೆಗೆ ವಿಶೇಷ ಶುಚಿತ್ವ ಅಭಿಯಾನ 3.0 ಅನ್ನು ಸಚಿವಾಲಯವು ಹಮ್ಮಿಕೊಂಡಿದೆ.
ರೈಲ್ವೆಯ ಮುಖ್ಯ ಕಚೇರಿಗಳು, ವಿಭಾಗೀಯ ಕಚೇರಿಗಳು, ಉತ್ಪಾದನಾ ಘಟಕಗಳು, ಸಂಶೋಧನಾ ವಿನ್ಯಾಸ ಮತ್ತು ಪ್ರಮಾಣೀಕರಣ ಸಂಸ್ಥೆ, ತರಬೇತಿ ಸಂಸ್ಥೆಗಳು ಹಾಗೂ 7,000ಕ್ಕೂ ಹೆಚ್ಚು ರೈಲ್ವೆ ನಿಲ್ದಾಣಗಳನ್ನು ಈ ಅಭಿಯಾನದಡಿ ಸೇರ್ಪಡೆ ಮಾಡಿಕೊಳ್ಳಲಾಗಿತ್ತು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.