ಶ್ರೀಮಂತರನ್ನು ಮಾತ್ರ ಗಮನದಲ್ಲಿರಿಸಿ ರೈಲ್ವೆ ನೀತಿ ರೂಪಿಸಲಾಗುತ್ತಿದೆ : ಕೇಂದ್ರ ಸರಕಾರಕ್ಕೆ ರಾಹುಲ್ ಗಾಂಧಿ ತರಾಟೆ

Update: 2024-03-03 15:11 GMT

ರಾಹುಲ್ ಗಾಂಧಿ | Photo: X \ @RahulGandhi

ಹೊಸದಿಲ್ಲಿ: ಕೇಂದ್ರ ಸರಕಾರ ಕೇವಲ ಶ್ರೀಮಂತರನ್ನು ಮಾತ್ರ ಗಮನದಲ್ಲಿರಿಸಿಕೊಂಡು ಭಾರತೀಯ ರೈಲ್ವೆ ನೀತಿಗಳನ್ನು ರೂಪಿಸಲಾಗುತ್ತಿದೆ. ಇದು ರೈಲ್ವೆಯನ್ನು ಅವಲಂಭಿಸಿರುವ ಭಾರತದ ಶೇ. 80 ಜನರಿಗೆ ಮಾಡುವ ದ್ರೋಹ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರವಿವಾರ ಕಿಡಿ ಕಾರಿದ್ದಾರೆ.

ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ನಂಬಿಕೆ ‘ದ್ರೋಹದ ಗ್ಯಾರಂಟಿ’ ಎಂದು ಅವರು ಪ್ರತಿಪಾದಿಸಿದ್ದಾರೆ.

‘ಎಕ್ಸ್’ನ ಪೋಸ್ಟ್ನಲ್ಲಿ ರಾಹುಲ್ ಗಾಂಧಿ, ಹವಾಯಿ ಚಪ್ಪಲಿ ಹಾಕಿಕೊಂಡು ನಡೆಯುವ ಜನರು ವಿಮಾನದಲ್ಲಿ ಪ್ರಯಾಣಿಸುವಂತೆ ಮಾಡುತ್ತೇನೆ ಎಂದು ಕನಸು ಸೃಷ್ಟಿಸಿದ ಪ್ರಧಾನಿ ಅವರು, ಈ ಜನರಿಂದ ‘ಬಡವರ ವಾಹನ’ವಾಗಿರುವ ರೈಲ್ವೆಯನ್ನು ಕಸಿದುಕೊಳ್ಳುತ್ತಿದ್ದಾರೆ ಎಂದರು.

‘‘ಪ್ರತಿ ವರ್ಷ ಶೇ. 10ರಷ್ಟು ಪ್ರಯಾಣ ದರ ಏರಿಕೆ, ಬೇಡಿಕೆ ಬೆಲೆ ಹೆಸರಲ್ಲಿ ಲೂಟಿ, ರದ್ದತಿ ಶುಲ್ಕ ಹೆಚ್ಚಳ, ದುಬಾರಿ ಪ್ಲಾಟ್ ಫಾರ್ಮ್ ಟಿಕೆಟ್ ನಿಂದಾಗಿ ಬಡ ಜನರಿಗೆ ರೈಲು ನಿಲ್ದಾಣದಲ್ಲಿ ಕಾಲಿಡಲು ಸಾಧ್ಯವಾಗದೇ ಇರುವ ನಡುವೆ ಗಣ್ಯರ ರೈಲುಗಳ ಚಿತ್ರವನ್ನು ತೋರಿಸಿ ಅವರನ್ನು ಸೆಳೆಯಲಾಗುತ್ತಿದೆ’’ ಎಂದು ಅವರು ಹೇಳಿದರು.

ರೈಲು ಪ್ರಯಾಣದಲ್ಲಿ ಈ ಹಿಂದೆ ಹಿರಿಯರಿಗೆ ನೀಡಲಾಗಿದ್ದ ವಿನಾಯತಿಗಳನ್ನು ಕೇಂದ್ರ ಸರಕಾರ ಕಿತ್ತುಕೊಂಡಿದೆ. ಆ ಮೂಲಕ ಕಳೆದ ಮೂರು ವರ್ಷಗಳಲ್ಲಿ ಹಿರಿಯ ನಾಗರಿಕರಿಂದ 7,300 ಕೋ.ರೂ. ಕಿತ್ತುಕೊಂಡಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರಕಾರ ರೈಲ್ವೆಯನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದೆ. ಅದಕ್ಕಾಗಿಯೇ ಸಾಮಾನ್ಯ ಜನರಿಗೆ ರೈಲು ಪ್ರಯಾಣ ಮಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ರೈಲ್ವೆಯ ಆದ್ಯತೆಯಿಂದ ಬಡ ಮತ್ತು ಮಧ್ಯಮ ವರ್ಗದ ಪ್ರಯಾಣಿಕರನ್ನು ಹೊರಗಿರಿಸಲಾಗಿದೆ ಎಂದು ಅವರು ಹೇಳಿದರು.

ಎಸಿ ಕೋಚ್ ಗಳ ಸಂಖ್ಯೆಯನ್ನು ಹೆಚ್ಚಿಸಲು, ಸಾಮಾನ್ಯ ಬೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗುತ್ತಿದೆ. ಸಾಮಾನ್ಯ ಬೋಗಿಗಳಲ್ಲಿ ಕಾರ್ಮಿಕರು ಹಾಗೂ ರೈತರು ಮಾತ್ರವಲ್ಲದೆ, ವಿದ್ಯಾರ್ಥಿಗಳು ಸೇವಾ ವರ್ಗದ ಜನರು ಕೂಡ ಪ್ರಯಾಣಿಸುತ್ತಾರೆ. ಸಾಮಾನ್ಯ ಬೋಗಿಗಳಿಗಿಂತ ಎಸಿ ಕೋಚ್ ಗಳ ಸಂಖ್ಯೆಯನ್ನು ಮೂರು ಪಟ್ಟು ಹೆಚ್ಚಿಸಲಾಗಿದೆ ಎಂದು ಅವರು ತಿಳಿಸಿದರು.

ಕೇಂದ್ರ ಸರಕಾರ ರೈಲ್ವೆ ಬಜೆಟ್ ಅನ್ನು ಪ್ರತ್ಯೇಕವಾಗಿ ಮಂಡಿಸುವ ಸಂಪ್ರದಾಯವನ್ನು ಈ ಹಿಂದೆಯೇ ಕೊನೆಗೊಳಿಸಿದೆ. ವಾಸ್ತವವಾಗಿ ನೋಡುವುದಾದರೆ ರೈಲ್ವೆಯಲ್ಲಿನ ಶೋಷಣೆಯನ್ನು ಮರೆ ಮಾಡುವ ಪಿತೂರಿ ಇದಾಗಿದೆ ಎಂದು ಅವರು ಆರೋಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News