ರಾಜಸ್ಥಾನ ಸಂಪುಟ ವಿಸ್ತರಣೆ; 22 ಸಚಿವರ ಪ್ರಮಾಣವಚನ ಸ್ವೀಕಾರ
ಜೈಪುರ: ರಾಜಸ್ಥಾನದ ನೂತನ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಶನಿವಾರ ತಮ್ಮ ಸಂಪುಟವನ್ನು ವಿಸ್ತರಿಸಿದ್ದು, 22 ಮಂದಿ ಶನಿವಾರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ಸವಾಯಿ ಮಾಧೋಪುರ ಶಾಸಕ ಕಿರೋರಿಲಾಲ್ ಮೀನಾ, ಜೋತ್ವಾರಾ ಶಾಸಕ ರಾಜ್ಯವರ್ಧನ ಸಿಂಗ್ ರಾಥೋಡ್, ಕಾಂಗ್ರೆಸ್ ಅಭ್ಯರ್ಥಿಯ ನಿಧನದಿಂದ ಚುನಾವಣೆ ಮುಂದೂಡಲ್ಪಟ್ಟ ಕರಣ್ಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುರೇಂದ್ರ ಪಾಲ್ ಸಿಂಗ್ ಟಿ.ಟಿ. ಸಂಪುಟ ಸೇರಿರುವ ಪ್ರಮುಖರು.
ಸುರೇಂದ್ರ ಸಿಂಗ್ ಅವರನ್ನು ಸ್ವತಂತ್ರ ಹೊಣೆಯ ರಾಜ್ಯ ಸಚಿವರನ್ನಾಗಿ ನೇಮಿಸಲಾಗಿದೆ. ಜನವರಿ 5ರಂದು ಚುನಾವಣೆ ನಡೆಯುವ ಕ್ಷೇತ್ರದ ಅಭ್ಯರ್ಥಿಯನ್ನು ಸಚಿವರನ್ನಾಗಿ ಮಾಡಿರುವ ಕ್ರಮವನ್ನು ಕಾಂಗ್ರೆಸ್ ಟೀಕಿಸಿದೆ. ಈ ನೇಮಕದ ಮೂಲಕ ಬಿಜೆಪಿ ಮಾದರಿ ನೀತಿಸಂಹಿತೆ ಉಲ್ಲಂಘಿಸಿದ್ದು, ಮತದಾರರ ಮೇಲೆ ಪ್ರಭಾವ ಬೀರುವ ಹುನ್ನಾರ ಎಂದು ಕಾಂಗ್ರೆಸ್ ಮಾಜಿ ಸಿಎಂ ಅಶೋಕ್ ಗೆಹ್ಲೋಟ್ ದೂರಿದ್ದಾರೆ.
"ಅಧಿಕಾರದಲ್ಲಿರುವ ಪಕ್ಷ ಮಾದರಿ ನೀತಿಸಂಹಿತೆಯನ್ನು ಉಲ್ಲಂಘಿಸಿದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಲು ಪಕ್ಷ ನಿರ್ಧರಿಸಿದೆ" ಎಂದು ಪಕ್ಷದ ಅಧ್ಯಕ್ಷ ಗೋವಿಂದ್ ಸಿಂಗ್ ದೊತಸ್ರಾ ಹೇಳಿದ್ದಾರೆ. ಬಿಜೆಪಿ ಇದನ್ನು ಅಲ್ಲಗಳೆದಿದೆ. ಈ ಕ್ಷೇತ್ರದ ಚುನಾವಣೆ ಫಲಿತಾಂಶ ಜನವರಿ 8ರಂದು ಹೊರಬೀಳಲಿದೆ.
ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಶಾಸಕರ ಪುತ್ರ ಹಾಗೂ ಕಾಂಗ್ರೆಸ್ ಅಭ್ಯರ್ಥಿ ರೂಪಿಂದರ್ ಸಿಂಗ್ ಕೂನರ್ ಅನುಕಂಪದ ಅಲೆಯ ಲಾಭವನ್ನು ನಿರೀಕ್ಷಿಸಿದ್ದಾರೆ. ಬಿಜೆಪಿ ಇದಕ್ಕೆ ಪ್ರತಿತಂತ್ರ ಹೂಡಿ, ಬಿಜೆಪಿ ಅಭ್ಯರ್ಥಿ ಗೆದ್ದಲ್ಲಿ, ಸಚಿವ ಸಂಪುಟದಲ್ಲಿ ಸ್ಥಾನ ಸಿಗಲಿದೆ ಎಂಬ ಸಂದೇಶವನ್ನು ಮತದಾರರಿಗೆ ರವಾನಿಸಿದೆ.
ಪ್ರಮಾಣವಚನ ಸ್ವೀಕರಿಸಿದ 22 ಸಚಿವರ ಪೈಕಿ 12 ಮಂದಿ ಸಂಪುಟ ದರ್ಜೆ ಸಚಿವರಾಗಿ, ಐದು ಮಂದಿ ಸ್ವತಂತ್ರ ಹೊಣೆಯ ರಾಜ್ಯ ಸಚಿವರಾಗಿ ಹಾಗೂ 5 ಮಂದಿ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಜಯಾಲ್ ಶಾಸಕಿ ಡಾ.ಮಂಜು ಬಘಮಾರ್ ಸಂಪುಟದಲ್ಲಿ ಸ್ಥಾನ ಪಡೆದ ಏಕೈಕ ಮಹಿಳೆ. ಸಿಎಂ, ಉಪ ಮುಖ್ಯಮಂತ್ರಿಗಳು ಸೇರಿದಂತೆ ಒಟ್ಟು 25 ಮಂದಿ ಇದೀಗ ಸಂಪುಟದಲ್ಲಿದ್ದಾರೆ.