ರಾಜಸ್ಥಾನ: 22 ತಿಂಗಳ ಮಗುವಿನ ಚಿಕಿತ್ಸೆಗೆ ನೆರವಾದ ಕ್ರೌಡ್ ಫಂಡಿಂಗ್; 17.5 ಕೋಟಿ ಸಂಗ್ರಹ
ಜೈಪುರ: ಜನಪ್ರಿಯ ನಟ, ಭಾರತ ತಂಡದಲ್ಲಿ ಆಡಿದ ಕ್ರಿಕೆಟಿಗ, ತರಕಾರಿ ವ್ಯಾಪಾರಿ, ಜನಸಾಮಾನ್ಯರು ಹೀಗೆ ಎಲ್ಲರನ್ನೂ ಜತೆ ಸೇರಿಸಿದ ಅಂಶ ಯಾವುದು? ರಾಜಸ್ಥಾನದ ಈ ಹೃದಯಸ್ಪರ್ಶಿ ಕಥೆ 22 ತಿಂಗಳ ಮಗುವಿಗೆ ಮರುಹುಟ್ಟು ನೀಡಲು ಸಾಧ್ಯವಾಗಿದೆ. ಸೊಂಟದಿಂದ ಕೆಳಭಾಗದ ಸ್ವಾಧೀನ ಕಳೆದುಕೊಂಡಿದ್ದ ಪುಟ್ಟ ಮಗುವಿಗೆ ಸಹಜ ಬದುಕು ಸಾಗಿಸುವಂತಾಗಲು 17.5 ಕೋಟಿ ರೂಪಾಯಿ ಮೌಲ್ಯದ ಚುಚ್ಚುಮದ್ದು ಅಗತ್ಯವಿತ್ತು.
ರಾಜಸ್ಥಾನದ ಪಿಎಸ್ಐ ನರೇಶ್ ಶರ್ಮಾ ಅವರ ಮಗ ಹೃದಯಾಂಶ್ ಶರ್ಮಾ, ಸ್ಪೈನಲ್ ಅಟ್ರೋಫಿ ಎಂಬ ಅಪರೂಪದ ವಂಶವಾಹಿ ಕಾಯಿಲೆಯಿಂದ ಬಳಲುತ್ತಿದ್ದ. ಇದಕ್ಕೆ ಚಿಕಿತ್ಸೆಗೆ ಝೋಲ್ ಜೆನ್ ಸ್ಮಾ ಎಂಬ ಜೀನ್ ಥೆರಪಿ ಚುಚ್ಚುಮದ್ದಿನ ಒಂದು ಡೋಸ್ ಬೇಕಾಗಿತ್ತು. ವಿಶ್ವದ ಅತ್ಯಂತ ದುಬಾರಿ ಎನಿಸಿದ ಈ ಚುಚ್ಚುಮದ್ದಿನ ಅಂದಾಜು ಬೆಲೆ 17.5 ಕೋಟಿ ರೂಪಾಯಿ.
ಕಳೆದ ಫೆಬ್ರುವರಿಯಲ್ಲಿ ಮಗುವಿಗೆ 20 ತಿಂಗಳಾಗಿದ್ದಾಗ ರಾಜಸ್ಥಾನ ಪೊಲೀಸರು ಕ್ರೌಡ್ ಫಂಡಿಂಗ್ ಅಭಿಯಾನ ಆರಂಭಿಸಿದರು. ಎರಡು ವರ್ಷಕ್ಕೆ ಮುನ್ನ ಮಗುವಿಗೆ ಈ ಚುಚ್ಚುಮದ್ದು ನೀಡಬೇಕಾಗಿದ್ದರಿಂದ ದೇಣಿಗೆ ನೀಡಲು ಎರಡು ತಿಂಗಳ ಗಡುವು ವಿಧಿಸಿದ್ದರು.
ಇದಕ್ಕೆ ಕ್ರಿಕೆಟರ್ ದೀಪಕ್ ಚಹರ್, ನಟ ಸೋನು ಸೂದ್ ಅವರಂಥ ದಿಗ್ಗಜರಿಂದ ಬೆಂಬಲ ಸಿಕ್ಕಿ, ಸಾಮಾಜಿಕ ಜಾಲತಾಣಗಳಲ್ಲಿ ಅವರು ಮನವಿಯನ್ನು ಪೋಸ್ಟ್ ಮಾಡಿದರು. ಇದಕ್ಕೆ ಹಣ್ಣು ವ್ಯಾಪಾರಿಗಳು, ತರಕಾರಿ ಮಾರುವವರು, ಅಂಗಡಿ ಮಾಲೀಕರು, ವಿವಿಧ ಸ್ವಯಂಸೇವಾ ಸಂಸ್ಥೆಗಳು ಹೀಗೆ ಸಮಾಜದ ಎಲ್ಲ ಸ್ತರಗಳ ಜನ ಸ್ಪಂದಿಸಿದರು.
ರಾಜಸ್ಥಾನದಲ್ಲಿ ಇಂಥ ಬೃಹತ್ ಕ್ರೌಡ್ ಫಂಡಿಂಗ್ ನಡೆದದ್ದು ಇದೇ ಮೊದಲು. ಮೂರು ತಿಂಗಳ ಒಳಗಾಗಿ 9 ಕೋಟಿ ಸಂಗ್ರಹವಾಗಿ ಹೃದಯಾಂಶ್ಗೆ ಜೆ.ಕೆ.ಲೋನ್ ಆಸ್ಪತ್ರೆಯಲ್ಲಿ ಚುಚ್ಚುಮದ್ದು ನೀಡಲಾಯಿತು. ಉಳಿದ ಮೊತ್ತವನ್ನು ಒಂದು ವರ್ಷದ ಒಳಗಾಗಿ ಮೂರು ಕಂತುಗಳಲ್ಲಿ ತುಂಬಬೇಕಿದೆ.