ರಾಜಸ್ಥಾನ | ಅಶೋಕ್ ಗೆಹ್ಲೋಟ್ ಅವಧಿಯಲ್ಲಿ ರಚನೆಯಾಗಿದ್ದ 9 ಜಿಲ್ಲೆಗಳನ್ನು ವಿಸರ್ಜಿಸಿದ ಬಿಜೆಪಿ ಸರಕಾರ
ಜೈಪುರ: ಈ ಹಿಂದಿನ ಕಾಂಗ್ರೆಸ್ ಅವಧಿಯಲ್ಲಿ ರಚನೆಯಾಗಿದ್ದ 9 ಜಿಲ್ಲೆಗಳು ಪ್ರಾಯೋಗಿಕ ಅಥವಾ ಸಾರ್ವಜನಿಕರ ಹಿತಾಸಕ್ತಿಯಿಂದ ಕೂಡಿರಲಿಲ್ಲ ಎಂಬ ಕಾರಣ ನೀಡಿ ರಾಜಸ್ಥಾನದ 9 ಜಿಲ್ಲೆಗಳನ್ನು ವಿಸರ್ಜಿಸುವ ನಿರ್ಧಾರವನ್ನು ಹಾಲಿ ಬಿಜೆಪಿ ಸರಕಾರ ಕೈಗೊಂಡಿದೆ.
ಶನಿವಾರ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನೂತನವಾಗಿ ರಚಿಸಲಾಗಿರುವ ವಿಭಾಗಗಳನ್ನು(divisions) ಕೂಡ ವಿಸರ್ಜಿಸುವ ನಿರ್ಣಯ ಕೈಗೊಳ್ಳಲಾಗಿದೆ. ಸದ್ಯ ರಾಜ್ಯ ಏಳು ವಿಭಾಗಗಳು ಹಾಗೂ 41 ಜಿಲ್ಲೆಗಳನ್ನು ಮಾತ್ರ ಹೊಂದಿರಲಿದೆ ಎಂದು ಕಾನೂನು ಸಚಿವ ಜೋಗರಾಮ್ ಪಟೇಲ್ ತಿಳಿಸಿದ್ದಾರೆ.
ಇದಲ್ಲದೆ, ರಾಜಸ್ಥಾನದಲ್ಲಿ ಸಿಇಟಿ ಅಂಕಗಳ ಒಂದು ವರ್ಷದ ಮಾನ್ಯತೆಯನ್ನು ಮೂರು ವರ್ಷಕ್ಕೆ ವಿಸ್ತರಿಸುವ ಮತ್ತೊಂದು ನಿರ್ಣಯವನ್ನೂ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ. ನೂತನ ವಿಭಾಗಗಳು ಹಾಗೂ ಜಿಲ್ಲೆಗಳನ್ನು ವಿಸರ್ಜಿಸುವ ಬಿಜೆಪಿ ಸರಕಾರದ ನಿರ್ಣಯವನ್ನು ರಾಜ್ಯ ಕಾಂಗ್ರೆಸ್ ವಿರೋಧಿಸಿದ್ದು, ಈ ಬಗ್ಗೆ ನ್ಯಾಯಾಲಯದ ಮೆಟ್ಟಿಲೇರಲಾಗುವುದು ಎಂದು ಹೇಳಿದೆ.
ಈ ಹಿಂದೆ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರಕಾರವು 17 ನೂತನ ಜಿಲ್ಲೆಗಳು ಹಾಗೂ ಮೂರು ಹೊಸ ವಿಭಾಗಗಳನ್ನು ರಚಿಸಿತ್ತು. ಇದರೊಂದಿಗೆ ಇನ್ನೂ ಮೂರು ಹೊಸ ಜಿಲ್ಲೆಗಳ ರಚನೆಗೆ ಅಧಿಸೂಚನೆಯನ್ನೂ ಹೊರಡಿಸಿತ್ತು. ಆದರೆ, ಈ ನೂತನ ಮೂರು ಜಿಲ್ಲೆಗಳ ರಚನೆಯ ಪ್ರಸ್ತಾವವನ್ನೂ ಭಜನ್ ಲಾಲ್ ಶರ್ಮ ನೇತೃತ್ವದ ಬಿಜೆಪಿ ಸರಕಾರ ರದ್ದುಗೊಳಿಸಿದೆ.