ರಾಜಸ್ಥಾನ ಶಾಸಕಾಂಗ ಪಕ್ಷದ ಸಭೆ ಇಂದು: ಹೊಸ ಸಿಎಂ ಘೋಷಣೆ ನಿರೀಕ್ಷೆ

Update: 2023-12-12 04:47 GMT

Photo: PTI

ಹೊಸದಿಲ್ಲಿ: ರಾಜಸ್ಥಾನ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿ ಒಂಬತ್ತು ದಿನ ಕಳೆದರೂ ನೂತನ ಮುಖ್ಯಮಂತ್ರಿಯ ಆಯ್ಕೆಗೆ ಬಿಜೆಪಿ ವರಿಷ್ಠರು ವಿಳಂಬ ಮಾಡುತ್ತಿದ್ದಾರೆ. ಛತ್ತೀಸ್ ಗಢ ಮತ್ತು ಮಧ್ಯಪ್ರದೇಶದ ಬಳಿಕ ಮಂಗಳವಾರ ರಾಜಸ್ಥಾನ ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಲಾಗಿದ್ದು, ಇದರಲ್ಲಿ ನೂತನ ನಾಯಕನನ್ನು ಆಯ್ಕೆ ಮಾಡುವ ನಿರೀಕ್ಷೆ ಇದೆ. ಎರಡೂ ರಾಜ್ಯಗಳಲ್ಲಿ ಅಚ್ಚರಿಯ ಆಯ್ಕೆ ಮಾಡಿರುವ ಬಿಜೆಪಿ ಈ ರಾಜ್ಯದಲ್ಲಿ ಯಾವ ತಂತ್ರ ಅನುಸರಿಸುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

ವೀಕ್ಷಕರಾಗಿ ನೇಮಕಗೊಂಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಇಬ್ಬರು ಸಹ ವೀಕ್ಷಕರಾದ ವಿನೋದ್ ತಾವ್ಡೆ ಮತ್ತು ಸರೋಜ್ ಪಾಂಡೆ ಮಂಗಳವಾರ ಬೆಳಿಗ್ಗೆ ಆಗಮಿಸುವರು. ಸಂಜೆ 4ಕ್ಕೆ ಪಕ್ಷದ ಕಚೇರಿಯಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಮಧ್ಯಾಹ್ನ 1.30ರಿಂದ ಹೊಸ ಶಾಸಕರ ನೋಂದಣಿ ಆರಂಭವಾಗಲಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಭಜನ್ ಲಾಲ್ ಶರ್ಮಾ ಪ್ರಕಟಿಸಿದ್ದಾರೆ.

ನವೆಂಬರ್ 25ರಂದು ನಡೆದ ಚುನಾವಣೆಯಲ್ಲಿ ಬಿಜೆಪಿ 199 ಸದಸ್ಯಬಲದ ವಿಧಾನಸಭೆಯಲ್ಲಿ 115 ಸ್ಥಾನಗಳನ್ನು ಗಳಿಸುವ ಮೂಲಕ ಕಾಂಗ್ರೆಸ್ ನಿಂದ ಅಧಿಕಾರ ಕಿತ್ತುಕೊಂಡಿದೆ. ಎರಡು ಬಾರಿಯ ಸಿಎಂ ವಸುಂಧರ ರಾಜೇ ವಿಧಾನಸಭಾ ಚುನಾವಣೆಯಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದು, ಅವರು ಸಿಎಂ ಹುದ್ದೆಯ ಪ್ರಬಲ ಆಕಾಂಕ್ಷಿ. 70 ವರ್ಷ ವಯಸ್ಸಿನ ಇವರು ರಾಜ್ಯದಲ್ಲಿ ಬಿಜೆಪಿಯ ಪ್ರಮುಖ ಮುಖ ಹಾಗೂ ಐದು ಬಾರಿ ಸಂಸದೆಯಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದವರು.

ರಜಪೂತ ಸಮಾಜಕ್ಕೆ ಸೇರಿದ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮತ್ತೊಬ್ಬ ಪ್ರಬಲ ಆಕಾಂಕ್ಷಿ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಮಗ ವೈಭವ್ ವಿರುದ್ಧ 2019ರ ಲೋಕಸಭಾ ಚುನಾವಣೆಯಲ್ಲಿ ಜೋಧಪುರ ಕ್ಷೇತ್ರದಿಂದ ಗೆದ್ದು ಖ್ಯಾತಿಗೆ ಬಂದವರು. ಆರೆಸ್ಸೆಸ್ ಮುಖಂಡರ ಜತೆ ಇವರು ನಿಕಟ ಸಂಪರ್ಕ ಹೊಂದಿರುವವರು. ಸಾಲ ಸಹಕಾರ ಸಂಘದ ಹಗರಣದಲ್ಲಿ ಇವರು ಷಾಮೀಲಾಗಿದ್ದಾರೆ ಎಂದು ಆಪಾದಿಸಿದ ಕಾಂಗ್ರೆಸ್ ಪಕ್ಷ 2020ರಲ್ಲಿ ಸರ್ಕಾರವನ್ನು ಬೀಳಿಸುವ ಪ್ರಯತ್ನ ಮಾಡಿದವರು ಎಂದು ದೂರಿದೆ.

ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಮೂರನೇ ಆಕಾಂಕ್ಷಿ. ಇವರು ಮಾಜಿ ಉನ್ನತಾಧಿಕಾರಿ. ಚಿತ್ತೋರ್ ಗಢದಿಂದ ಎರಡು ಬಾರಿ ಸಂಸತ್ತಿಗೆ ಆಯ್ಕೆಯಾಗಿದ್ದಾರೆ. ಸಿ.ಪಿ.ಜೋಶಿ ಕೂಡಾ ಸಿಎಂ ಹುದ್ದೆಯ ರೇಸ್ ನಲ್ಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News