ರಾಜೀವ್ ಚಂದ್ರಶೇಖರ್ ವಿರುದ್ಧ ಡಿ. 4ರ ವರೆಗೆ ದಂಡನಾತ್ಮಕ ಕ್ರಮ ಬೇಡ ; ಕೇರಳ ಹೈಕೋರ್ಟ್ ಸೂಚನೆ
ತಿರುವನಂತಪುರಂ: ಡಿಸೆಂಬರ್ 4ರವರೆಗೆ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ವಿರುದ್ಧ ಯಾವುದೇ ದಂಡನಾತ್ಮಕ ಕ್ರಮ ತೆಗೆದುಕೊಳ್ಳಬಾರದು ಎಂದು ಕೇರಳ ಹೈಕೋರ್ಟ್ ಬುಧವಾರ ರಾಜ್ಯ ಪೊಲೀಸರಿಗೆ ಸೂಚಿಸಿದೆ.
ರಾಜ್ಯದ ಚರ್ಚೊಂದರಲ್ಲಿ ನಡೆದ ಸ್ಫೋಟಗಳ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಕೇಂದ್ರ ಸಚಿವರು ಹಾಕಿರುವ ಸಂದೇಶವು ವಿಭಿನ್ನ ಗುಂಪುಗಳ ನಡುವೆ ದ್ವೇಷ ಹುಟ್ಟುಹಾಕುವ ಉದ್ದೇಶ ಹೊಂದಿತ್ತು ಎಂದು ಆರೋಪಿಸಿ ಪೊಲೀಸರು ಅವರ ವಿರುದ್ಧ ಎರಡು ಮೊಕದ್ದಮೆಗಳನ್ನು ದಾಖಲಿಸಿದ್ದಾರೆ.
ಎರ್ನಾಕುಳಂ ಜಿಲ್ಲೆಯ ಕಲಮಶೇರಿ ಎಂಬಲ್ಲಿರುವ ಜೆಹೋವನ ಸಾಕ್ಷಿಗಳು ಎಂಬ ಕ್ರೈಸ್ತ ಪಂಥವೊಂದರ ಸಭಾಂಗಣದಲ್ಲಿ ಅಕ್ಟೋಬರ್ 29ರಂದು ನಡೆದ ಸರಣಿ ಸ್ಫೋಟಗಳಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ.
ಫೆಲೆಸ್ತೀನಿನ ಹಮಾಸ್ ಸಂಘಟನೆಗೆ ಬೆಂಬಲ ನೀಡುತ್ತಿರುವ ಸಂಘಟನೆಗಳ ಬಗ್ಗೆ ಕೇರಳ ಸರಕಾರವು ಕುರುಡುತನದಿಂದ ವರ್ತಿಸುತ್ತಿದೆ ಎಂಬುದಾಗಿ ಕೇಂದ್ರ ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಚಂದ್ರಶೇಖರ್ ತನ್ನ ಸಂದೇಶದಲ್ಲಿ ಆರೋಪಿಸಿದ್ದರು.
‘‘ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೊಸದಿಲ್ಲಿಯಲ್ಲಿ ಇಸ್ರೇಲ್ ವಿರುದ್ಧ ಪ್ರತಿಭಟನೆ ಮಾಡುತ್ತಾರೆ, ಆದರೆ ಜಿಹಾದಿಗಾಗಿ ಭಯೋತ್ಪಾದಕ ಹಮಾಸ್ ನೀಡುತ್ತಿರುವ ಬಹಿರಂಗ ಕರೆಗಳು ಅಮಾಯಕ ಕ್ರೈಸ್ತರ ಮೇಲೆ ದಾಳಿಗಳು ಮತ್ತು ಬಾಂಬ್ ಸ್ಫೋಟಗಳಿಗೆ ಕಾರಣವಾಗಿವೆ’’ ಎಂದು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಹಾಕಿದ ಸಂದೇಶದಲ್ಲಿ ಅವರು ಹೇಳಿದ್ದರು.
ಸ್ಫೋಟ ನಡೆದ ಗಂಟೆಗಳ ಬಳಿಕ, ಡೋಮಿನಿಕ್ ಮಾರ್ಟಿನ್ ಎಂಬ ವ್ಯಕ್ತಿಯು ಸ್ಫೋಟಗಳ ಹೊಣೆ ಹೊತ್ತಿದ್ದನು.
ಬುಧವಾರ, ಚಂದ್ರಶೇಖರ್ ಪರವಾಗಿ ಹೈಕೋರ್ಟ್ ನಲ್ಲಿ ಹಾಜರಾದ ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ, ಸಚಿವರ ವಿರುದ್ಧದ ಆರೋಪಗಳು ನಿರಾಧಾರ ಮತ್ತು ರಾಜಕೀಯ ಪ್ರೇರಿತವಾಗಿದೆ ಎಂದು ಹೇಳಿದರು. ಚಂದ್ರಶೇಖರ್ ಯಾವುದೇ ಸಮುದಾಯದ ವಿರುದ್ಧ ಹೇಳಿಕೆ ನೀಡಿಲ್ಲ, ‘‘ಕೇರಳದಲ್ಲಿ ತುಷ್ಟೀಕರಣ ರಾಜಕೀಯ ನಡೆಯುತ್ತಿದೆ’’ ಎಂದಷ್ಟೇ ಹೇಳಿದ್ದಾರೆ ಎಂದರು.