ರಾಜ್ಯಸಭಾ ಚುನಾವಣೆ: ಲಾಟರಿ ಡ್ರಾದಲ್ಲಿ ತನ್ನ ಸೋಲು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಲೇರಿದ ಅಭಿಷೇಕ್ ಮನು ಸಿಂಘ್ವಿ
ಹೊಸದಿಲ್ಲಿ: ಹಿಮಾಚಲ ಪ್ರದೇಶದಿಂದ ರಾಜ್ಯಸಭಾ ಚುನಾವಣೆಯಲ್ಲಿ ತನ್ನ ಸೋಲನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಅವರು ಶನಿವಾರ ಹೈಕೋರ್ಟ್ ಮೆಟ್ಟಲೇರಿದ್ದಾರೆ. ಮತಗಳಿಕೆಯಲ್ಲಿ ಟೈ ಉಂಟಾಗಿದ್ದರಿಂದ ಲಾಟರಿ ಮೂಲಕ ವಿಜಯೀ ಅಭ್ಯರ್ಥಿಯನ್ನು ನಿರ್ಧರಿಸುವುದಕ್ಕಾಗಿ ಚುನಾವಣಾಧಿಕಾರಿ ಅನುಸರಿಸಿದ ಲಾಟರಿ ನಿಯಮವನ್ನು ಅವರು ಪ್ರಶ್ನಿಸಿದ್ದಾರೆ.
ಫೆಬ್ರವರಿ 27ರಂದು ಹಿಮಾಚಲಪ್ರದೇಶದ ವಿಧಾನಸಭೆಯಿಂದ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹರ್ಷ ಮಹಾಜನ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಅಭಿಷೇಕ್ ಸಿಂಘ್ವಿ ಮನು ಅವರು ತಲಾ 34 ಮತಗಳನ್ನು ಗಳಿಸಿದ್ದರು. ಲಾಟರಿಯಲ್ಲಿ ಯಾರ ಹೆಸರು ಬರುವುದೋ ಆತನನ್ನು ಪರಾಜಿತನೆಂದು ಪರಿಗಣಿಸುವ ನಿಯಮವನ್ನು ಚುನಾವಣಾಧಿಕಾರಿ ಅನುಸರಿಸಿದ್ದರು. ಆದರಂತೆ ಲಾಟರಿ ಡ್ರಾದಲ್ಲಿ ಸಿಂಘ್ವಿ ಹೆಸರು ಬಂದಿದ್ದರಿಂದ ಬಿಜೆಪಿ ಅಭ್ಯರ್ಥಿ ಹರ್ಷ ಮಹಾಜನ್ ವಿಜೇತ ಅಭ್ಯರ್ಥಿಯೆಂದು ಘೋಷಿಸಲಾಗಿತ್ತು.
ಶಿಮ್ಲಾದ ಹಿಮಾಚಲಪ್ರದೇಶ ಹೈಕೋರ್ಟ್ ನಲ್ಲಿ ಇಂದು ಅರ್ಜಿಯನ್ನು ಸಲ್ಲಿಸಿ ಸುದ್ದಿಗಾರರ ಜೊತೆ ಮಾತನಾಡಿದ ಸಿಂಘ್ವಿ, ‘‘ಲಾಟರಿ ಡ್ರಾದಲ್ಲಿ ಯಾವ ವ್ಯಕ್ತಿಯ ಹೆಸರು ಡ್ರಾದಲ್ಲಿ ಬರುವುದೋ ಆತನನ್ನು ಪರಾಜಿತ ಅಭ್ಯರ್ಥಿಯೆಂದು ವ್ಯಾಖ್ಯಾನಿಸುವಂತಹ ನಿಯಮಗಳು ಯಾವುದೇ ಕಾನೂನಿನಲ್ಲಾಗಲಿ ಅಥವಾ ಕಾಯ್ದೆಯಲ್ಲಾಗಲಿ ಇಲ್ಲ’’ ಎಂದು ಸಿಂಘ್ವಿ ಹೇಳಿದ್ದಾರೆ.
‘‘ಇಬ್ಬರು ವ್ಯಕ್ತಿಗಳ ನಡುವೆ ಟೈ ಉಂಟಾದಾಗ, ಡ್ರಾ ಮಾಡುವ ಲಾಟರಿಯಲ್ಲಿ ಯಾರ ಹೆಸರು ಬರುವುದೋ ಅವರನ್ನು ವಿಜೇತನೆಂದು ಪರಿಗಣಿಸಲಾಗುತ್ತದೆಯೇ ಹೊರತು ಪರಾಜಿತನೆಂದಲ್ಲ. ಜಗತ್ತಿನ ಎಲ್ಲೆಡೆ ಯಾವುದೇ ಸಂಪ್ರದಾಯ ಅಥವಾ ಆಚರಣೆಗಳಲ್ಲಿ ಇರುವ ಈ ಪದ್ದತಿಯನ್ನು ಚುನಾವಣಾಧಿಕಾರಿಯ ನಡೆಯು ಉಲ್ಲಂಘಿಸಿದೆ. ಒಂದು ವೇಳೆ ನಮ್ಮ ವಾದವನ್ನು ಹೈಕೋರ್ಟ್ ಒಪ್ಪಿಕೊಂಡಿದ್ದೇ ಆದಲ್ಲಿ,ಘೋಷಿತ ಚುನಾವಣಾ ಫಲಿತಾಂಶವು ತಪ್ಪಾಗಲಿದೆ ಎಂದು ಸಿಂಘ್ವಿ ಹೇಳಿದ್ದಾರೆ.
ಹಿಮಾಚಲ ಪ್ರದೇಶ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷವು 40 ಶಾಸಕರ ಬಲವನ್ನು ಹಾಗೂ ಮೂವರು ಪಕ್ಷೇತರರ ಬೆಂಬಲವನ್ನು ಹೊಂದಿದ್ದರೂ, ಹರ್ಷ ಮಹಾಜನ್ ಹಾಗೂ ಸಿಂಘ್ವಿ ಇಬ್ಬರೂ ತಲಾ 34 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್ ಆರು ಮಂದಿ ಬಂಡುಕೋರ ಶಾಸಕರು ಹಾಗೂ ಮೂವರು ಪಕ್ಷೇತರರು ಬಿಜೆಪಿ ಅಭ್ಯರ್ಥಿ ಹರ್ಷ ಮಹಾಜನ್ ಪರವಾಗಿ ಮತಚಲಾಯಿಸಿದ್ದುದೇ ಉಭಯ ಅಭ್ಯರ್ಥಿಗಳು ಸಮಾನಮತಗಳನ್ನು ಪಡೆಯಲು ಕಾರಣವಾಯಿತು.