ಕಾರ್ಮಿಕರ ಕೊರತೆಯಿಂದ ರಾಮಮಂದಿರದ ಕಾಮಗಾರಿ ವಿಳಂಬ: ನಿರ್ಮಾಣ ಸಮಿತಿ
ಹೊಸದಿಲ್ಲಿ: ಅಯೋಧ್ಯೆ ರಾಮ ಮಂದಿರವನ್ನು ಜೂನ್ 2025ರೊಳಗೆ ಪೂರ್ಣಗೊಳಿಸಲು ಯೋಜಿಸಲಾಗಿತ್ತು, ಈಗ ಸೆಪ್ಟೆಂಬರ್ 2025ರ ವೇಳೆಗೆ ಪೂರ್ಣಗೊಳಿಸಲಾಗುವುದು ಎಂದು ರಾಮ ಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಹೇಳಿದ್ದಾರೆ.
ಪ್ರಸ್ತುತ ಸುಮಾರು 200 ಕೆಲಸಗಾರರ ಕೊರತೆಯಿದ್ದು, ಮಂದಿರದ ಮೊದಲ ಮಹಡಿಯಲ್ಲಿ ಕೆಲವು ಕಲ್ಲುಗಳನ್ನು ಬದಲಾಯಿಸಬೇಕಿದೆ, ಇದು ವಿಳಂಬಕ್ಕೆ ಪ್ರಾಥಮಿಕ ಕಾರಣವಾಗಿದೆ. ಜೂನ್ 2025ರ ಬದಲಿಗೆ ಸೆಪ್ಟೆಂಬರ್ 2025ರ ವೇಳೆಗೆ ರಾಮಂದಿರ ನಿರ್ಮಾಣ ಕಾಮಗಾರಿ ಪೂರ್ಣವಾಗುವ ನಿರೀಕ್ಷೆಯಿದೆ ಎಂದು ಮಿಶ್ರಾ ಹೇಳಿದ್ದಾರೆ.
8.5 ಲಕ್ಷ 'ಬನ್ಸಿ ಪಹಾರ್ಪುರ್' ಕಲ್ಲುಗಳನ್ನು ಅಯೋದ್ಯೆಗೆ ತರಿಸಲಾಗಿದೆ. ಆದರೆ ಕಾರ್ಮಿಕರ ಕೊರತೆಯಿಂದ ನಿರ್ಮಾಣವು ನಿಧಾನಗೊಂಡಿದೆ. ಮೊದಲ ಮಹಡಿಯಲ್ಲಿನ ಕೆಲವು ಕಲ್ಲುಗಳು ತೆಳ್ಳಗೆ ಮತ್ತು ದುರ್ಬಲವಾಗಿ ಕಂಡು ಬಂದಿದೆ. ಆದ್ದರಿಂದ 'ಮಕ್ರಾನಾ' ಕಲ್ಲುಗಳಿಂದ ಅದನ್ನು ಬದಲಾಯಿಸಲಾಗುವುದು ಎಂದು ಮಿಶ್ರಾ ಹೇಳಿದ್ದಾರೆ.
ರಾಮ ಮಂದಿರ ನಿರ್ಮಾಣ ಸಮಿತಿಯ ಇತ್ತೀಚಿನ ಎರಡು ದಿನಗಳ ಸಭೆಯಲ್ಲಿ, ಸಭಾಂಗಣ, ಪ್ರದಕ್ಷಿಣೆ ಮಾರ್ಗ ಸೇರಿದಂತೆ ದೇವಾಲಯಕ್ಕೆ ಸಂಬಂಧಿಸಿದ ಇತರ ರಚನೆಗಳ ಬಗ್ಗೆ ಚರ್ಚೆ ನಡೆದಿದೆ. ಇವೆಲ್ಲವೂ ನಿರ್ಮಾಣ ಹಂತದಲ್ಲಿದೆ. ಭಗವಾನ್ ರಾಮನ ಆಸ್ಥಾನ ಸೇರಿದಂತೆ ದೇವಾಲಯದ ಪ್ರತಿಮೆಗಳು ಜೈಪುರದಲ್ಲಿ ನಿರ್ಮಾಣ ಹಂತದಲ್ಲಿವೆ ಮತ್ತು ಡಿಸೆಂಬರ್ ವೇಳೆಗೆ ಇವುಗಳು ಅಯೋಧ್ಯೆಗೆ ಬರುವ ನಿರೀಕ್ಷೆಯಿದೆ ಎಂದು ಮಿಶ್ರಾ ಹೇಳಿದ್ದಾರೆ.