ಸಂಸತ್ತಿನಲ್ಲಿ ನಿಂದನಾತ್ಮಕ ಪದ ಬಳಕೆಗೆ ನೋಟಿಸ್: ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಭೇಟಿಯಾದ ರಮೇಶ್ ಬಿಧೂರಿ

Update: 2023-09-25 09:42 GMT

ಹೊಸದಿಲ್ಲಿ: ಕಳೆದ ವಾರ ಬಿಎಸ್ಪಿ ಸಂಸದ ಕುನ್ವರ್ ಡ್ಯಾನಿಶ್ ಅಲಿ ವಿರುದ್ಧ ಕೋಮುವಾದಿ ನಿಂದನೆಗಳನ್ನು ಬಳಸಿದ್ದ ಬಿಜೆಪಿ ಸಂಸದ ರಮೇಶ್ ಬಿಧೂರಿ ಸೋಮವಾರ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾದರು. ಸಂಸತ್ತಿನಲ್ಲಿ ಅಶ್ಲೀಲ ನಿಂದನಾತ್ಮಕ ಪದಗಳನ್ನು ಬಳಸಿದ್ದ ರಮೇಶ್ ಬಿಧೂರಿಗೆ ಬಿಜೆಪಿಯು ಶೋಕಾಸ್ ನೋಟಿಸ್ ನೀಡಿದೆ. ಈ ವರ್ತನೆಯ ಬೆನ್ನಿಗೇ ವಿರೋಧ ಪಕ್ಷಗಳು ರಮೇಶ್ ಬಿಧೂರಿ ನಡವಳಿಕೆಯನ್ನು ತೀವ್ರವಾಗಿ ಖಂಡಿಸಿದ್ದರಿಂದ ಬಿಜೆಪಿ ಪಕ್ಷವು ತನ್ನ ಸದಸ್ಯನ ವಿರುದ್ಧ ಕ್ರಮ ಕೈಗೊಳ್ಳಲೇಬೇಕಾದ ಅನಿವಾರ್ಯಕ್ಕೆ ತುತ್ತಾಗಿದೆ ಎಂದು ndtv.com ವರದಿ ಮಾಡಿದೆ.

ಲೋಕಸಭೆಯಲ್ಲಿ ರಮೇಶ್ ಬಿಧೂರಿ ಬಳಸಿದ ಕೋಮುವಾದಿ ನಿಂದನೆಯ ಬಗ್ಗೆ ಪ್ರತಿಕ್ರಿಯಿಸಲು ರವಿವಾರ ಬಿಜೆಪಿ ನಿರಾಕರಿಸಿದೆ. ಆದರೆ, ಇಬ್ಬರೂ ಲೋಕಸಭಾ ಸದಸ್ಯರ ವಿರುದ್ಧ ಕ್ರಮ ಜರುಗಿಸುವಂತೆ ಕೋರಿರುವ ಪತ್ರಗಳನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸ್ವೀಕರಿಸಿದ್ದಾರೆ.

ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಸಾರ್ವಜನಿಕವಾಗಿ ತಮ್ಮನ್ನು ನಿಂದಿಸಿದ ಮರುದಿನ ಗದ್ಗದಿತರಾಗಿದ್ದ ದಾನಿಶ್ ಅಲಿ, ಆ ನಿಂದನೆಗಳಿಂದ ನನಗೆ ರಾತ್ರಿ ಹೊತ್ತು ನಿದ್ರಿಸಲಾಗುತ್ತಿಲ್ಲ ಹಾಗೂ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದೇನೆ ಎಂದು ಅಲವತ್ತುಕೊಂಡಿದ್ದರು. ರಮೇಶ್ ಬಿಧೂರಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿದ್ದರೆ ತಾನು ಲೋಕಸಭೆಯಿಂದ ಹೊರನಡೆಯುವ ನಿರ್ಧಾರವನ್ನು ಪರಿಗಣಿಸಬೇಕಾಗುತ್ತದೆ ಎಂದು ಬಿಎಸ್‍ಪಿ ಕೂಡಾ ಎಚ್ಚರಿಕೆ ನೀಡಿದೆ.

ಸಂಸತ್ತಿನಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ದಾಳಿ ನಡೆದ ನಂತರ, ದಾನಿಶ್ ಅಲಿಗೆ ಎಲ್ಲ ವಿರೋಧ ಪಕ್ಷಗಳಿಂದ ಬೆಂಬಲ ವ್ಯಕ್ತವಾಗಿದೆ. ಈ ಪೈಕಿ ಅವರನ್ನು ಭೇಟಿಯಾದ ಮೊದಲ ನಾಯಕ ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿ ಆಗಿದ್ದು, ಅವರು ದಾನಿಶ್ ಅಲಿಯನ್ನು ತಬ್ಬಿಕೊಂಡಿರುವ ಭಾವಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಆ ಭಾವಚಿತ್ರಕ್ಕೆ “ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ” ಎಂಬ ಶೀರ್ಷಿಕೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News