ರಾಮೇಶ್ವರಂ ಕೆಫೆಯಲ್ಲಿನ ಸ್ಫೋಟ ಘಟನೆಗೂ ಮಂಗಳೂರು ಸ್ಫೋಟ ಘಟನೆಗೂ ಸಂಬಂಧ ಇರುವಂತೆ ಕಾಣುತ್ತಿದೆ: ಡಿ.ಕೆ. ಶಿವಕುಮಾರ್
ಬೆಂಗಳೂರು: ಮಂಗಳೂರಿನಲ್ಲಿ ಸಂಭವಿಸಿದ್ದ ಸ್ಪೋಟದ ಘಟನೆಗೂ ʼದಿ ರಾಮೇಶ್ವರಂ ಕೆಫೆʼಯಲ್ಲಿನ ಸ್ಫೋಟ ಘಟನೆಗೂ ಸಂಬಂಧ ಇರುವಂತೆ ಇರುವಂತೆ ಕಾಣುತ್ತಿದೆ. ಎರಡೂ ಕಡೆ ಬಳಸಿದ ಸ್ಫೋಟಕ ಸಾಮಾಗ್ರಿಗಳಲ್ಲಿ ಸಾಮ್ಯತೆ ಇದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಶನಿವಾರ ಸದಾಶಿವ ನಗರದಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೀಗಾಗಿ ಮಂಗಳೂರು ಹಾಗೂ ಶಿವಮೊಗ್ಗ ಪೊಲೀಸರು ಬಂದು ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ. ಬೆಂಗಳೂರಿನ ಜನತೆ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.
ಸ್ಫೋಟದ ಪ್ರಕರಣವನ್ನು ನಮ್ಮ ಸರಕಾರ ಗಂಭೀರವಾಗಿ ಪರಿಗಣಿಸಿದೆ. ಈ ದುರ್ಘಟನೆಗೆ ಕಾರಣರಾಗಿರುವವರು ಯಾರೇ ಆಗಿದ್ದರೂ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ. ಪ್ರಕರಣದ ತನಿಖೆಗೆ 7-8 ತಂಡಗಳನ್ನು ನಿಯೋಜನೆ ಮಾಡಲಾಗಿದ್ದು, ಬೆಂಗಳೂರಿನಲ್ಲಿರುವ ಸಿಸಿಟಿವಿ ಪರಿಶೀಲನೆ ಮಾಡಲಾಗುತ್ತಿದೆ ಎಂದು ಶಿವಕುಮಾರ್ ಹೇಳಿದರು.
ದುಷ್ಕರ್ಮಿ ಹೇಗೆ ಬಂದ, ಯಾವ ರೀತಿ ಸ್ಫೋಟಕ ಇಟ್ಟು ಹೋದ ಎಂಬ ಬಗ್ಗೆ ವಿಡಿಯೋ ಸಿಕ್ಕಿವೆ. ಅವನ ಚಹರೆ ಬಗ್ಗೆ ಸುಳಿವು ಸಿಕ್ಕಿದೆ. ಈ ತನಿಖೆಯ ಮಾಹಿತಿಯನ್ನು ಈ ಹಂತದಲ್ಲಿ ಬಹಿರಂಗಪಡಿಸುವುದಿಲ್ಲ. ಪೊಲೀಸ್ ಅಧಿಕಾರಿಗಳು ತನಿಖೆ ಮಾಡಲು ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇವೆ. ಈ ಪ್ರಕರಣದಲ್ಲಿ ಪರಿಣಾಮಕಾರಿ ತನಿಖೆ ನಡೆಯಲಿದೆ ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.
ಬಿಜೆಪಿ ನಾಯಕರು ಏನೇ ಟೀಕೆ ಮಾಡಿಕೊಳ್ಳಲಿ ನಾವು ಅವರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ. ನಮಗೆ ರಾಜ್ಯದ ಘನತೆ ಕಾಪಾಡುವುದು ಪ್ರಮುಖ ಆದ್ಯತೆ. ಈ ಪ್ರಕರಣದಲ್ಲಿ ಸಹಕಾರ ಕೊಟ್ಟರೂ ಸರಿ, ರಾಜಕಾರಣ ಮಾಡಿದರೂ ಸರಿ. ನಾವು ಮಾತ್ರ ಈ ಪ್ರಕರಣವನ್ನು ಎಲ್ಲ ಆಯಾಮದಲ್ಲಿ ನೋಡಿ ತನಿಖೆ ಮಾಡಲಾಗುವುದು ಎಂದು ಅವರು ತಿಳಿಸಿದರು.
ಬಿಜೆಪಿ ನಾಯಕರು ಈ ವಿಚಾರದಲ್ಲಿ ಯಾವ ರೀತಿ ರಾಜಕಾರಣ ಮಾಡುತ್ತಿದ್ದಾರೆ ಎಂದು ನಾವು ನೋಡುತ್ತಿದ್ದೇವೆ. ಅವರ ಸಹಕಾರ ಬೇಡ. ಅವರು ಬೆಂಗಳೂರಿನ ಹೆಸರು ಹಾಳು ಮಾಡಲು ಏನೆಲ್ಲಾ ಪ್ರಯತ್ನ ಮಾಡುತ್ತಿದ್ದಾರೆ ಎಂಬುದು ನಮ್ಮ ಗಮನಕ್ಕೆ ಇದೆ ಎಂದು ಶಿವಕುಮಾರ್ ಕಿಡಿಕಾರಿದರು.
ಗುಪ್ತಚರ ಇಲಾಖೆ ವೈಫಲ್ಯವೆ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆ ರೀತಿ ಇಲ್ಲ. ಬಿಜೆಪಿ ಅವಧಿಯಲ್ಲೂ ಇಂತಹ ಘಟನೆಗಳು ನಡೆದಿವೆ. ಸಂಸತ್ತಿನಲ್ಲಿ ಏನಾಯ್ತು ಎಂದು ಎಲ್ಲರೂ ನೋಡಿದ್ದೇವೆ ಎಂದರು.