ರಾಮಕೃಷ್ಣ ಮಿಷನ್, ಭಾರತ್ ಸೇವಾಶ್ರಮ್ ಕುರಿತ ಹೇಳಿಕೆಗೆ ವ್ಯಾಪಕ ಟೀಕೆ | ಹೇಳಿಕೆ ಬದಲಿಸಿದ ಮಮತಾ ಬ್ಯಾನರ್ಜಿ

Update: 2024-05-20 15:43 GMT

ನರೇಂದ್ರ ಮೋದಿ , ಮಮತಾ ಬ್ಯಾನರ್ಜಿ | PC : PTI 

ಹೊಸದಿಲ್ಲಿ: ಸಮಾಜ ಸೇವೆಗೆ ರಾಮಕೃಷ್ಣ ಮಿಷನ್ ಹಾಗೂ ಭಾರತ್ ಸೇವಾಶ್ರಮ ಸಂಘವನ್ನು ಸೋಮವಾರ ಪ್ರಶಂಸಿಸಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಾನು ಯಾವುದೇ ಸಂಸ್ಥೆಯ ವಿರೋಧಿಯಲ್ಲ. ಆದರೆ, ರಾಜಕೀಯದಲ್ಲಿ ತೊಡಗಿದೆ ಒಂದಿಬ್ಬರನ್ನು ಟೀಕಿಸಿದೆ ಎಂದಿದ್ದಾರೆ.

ಈ ಎರಡು ಸಂಸ್ಥೆಗಳ ಕೆಲವು ಸಾಧುಗಳು ಬಿಜೆಪಿಯ ಸೂಚನೆಗೆ ಅನುಗುಣವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಮಮತಾ ಬ್ಯಾನರ್ಜಿ ಅವರು ಶನಿವಾರ ಆರೋಪಿಸಿದ್ದರು. ಈ ಹೇಳಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕಟುವಾಗಿ ಟೀಕಿಸಿದ್ದರು. ಮಮತಾ ಬ್ಯಾನರ್ಜಿ ಮುಸ್ಲಿಂ ತೀವ್ರಗಾಮಿಗಳ ಒತ್ತಡಕ್ಕೆ ಒಳಗಾಗಿದ್ದಾರೆ. ಟಿಎಂಸಿಯ ಮತ ಬ್ಯಾಂಕ್ ತುಷ್ಟೀಕರಣಕ್ಕೆ ಈ ಧಾರ್ಮಿಕ-ಸಾಮಾಜಿಕ ಸಂಸ್ಥೆಗಳಿಗೆ ಬೆದರಿಕೆ ಒಡ್ಡುತ್ತಿದೆ ಎಂದು ಹೇಳಿದ್ದರು.

ಬಂಕುರಾ ಒಂಡಾದಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, ನಾನು ರಾಮಕೃಷ್ಣ ಮಿಷನ್ ವಿರೋಧಿಯಲ್ಲ. ನಾನೇಕೆ ಆ ಸಂಸ್ಥೆಯನ್ನು ವಿರೋಧಿಸಲಿ ಅಥವಾ ಅವಮಾನಿಸಲಿ. ನಾನು ಒಂದಿಬ್ಬರ ಬಗ್ಗೆ ಮಾತನಾಡಿದ್ದೇನೆ ಎಂದಿದ್ದಾರೆ.

ಭಾರತ್ ಸೇವಾಶ್ರಮ್ ಸಂಘವನ್ನು ಕೂಡ ಪ್ರಶಂಸಿಸಿದ ಮಮತಾ ಬ್ಯಾನರ್ಜಿ ಅವರು, ಈ ಸಂಸ್ಥೆ ಜನರಿಗಾಗಿ ಸೇವೆ ಸಲ್ಲಿಸುತ್ತಿದೆ. ನಾನು ಕಾರ್ತಿ ಮಹಾರಾಜ್ ಅವರೊಂದಿಗೆ ಮಾತನಾಡಿದ್ದೆ. ಅವರು ರೆಜಿನಗರದ ಮತಗಟ್ಟೆಯಲ್ಲಿ ತೃಣಮೂಲ ಕಾಂಗ್ರೆಸ್ ಏಜೆಂಟ್ ಗೆ ಕುಳಿತುಕೊಳ್ಳಲು ಅವಕಾಶ ನೀಡಿರಲಿಲ್ಲ ಎಂದು ಹೇಳಿದರು.

ಮುರ್ಶಿದಾಬಾದ್ ಜಿಲ್ಲೆಯ ಭಾರತ್ ಸೇವಾಶ್ರಮ್ ಸಂಘದ ಸಾಧುಗಳು ಬಿಜೆಪಿ ಪರವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದ್ದ ಮಮತಾ ಬ್ಯಾನರ್ಜಿ, ರೆಜಿನಗರದಲ್ಲಿ ನಡೆದ ಎರಡು ಗುಂಪುಗಳ ನಡುವಿನ ಘರ್ಷಣೆ ಸಂದರ್ಭ ಅವರು ಜನರನ್ನು ಪ್ರಚೋದಿಸಿದ್ದರು ಎಂದು ಹೇಳಿದ್ದರು. ಅವರು ಬಿಜೆಪಿ ಪರವಾಗಿ ಕೆಲಸ ಮಾಡಲು ಬಯಸಿದರೆ, ಮಾಡಬಹುದು. ಆದರೆ, ಬಿಜೆಪಿಯ ಚಿಹ್ನೆಯನ್ನು ಧರಿಸಬೇಕು ಎಂದು ಅವರು ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News