ಬಿಹಾರ| ದಲಿತ ಬಾಲಕಿಯ ಸಾಮೂಹಿಕ ಅತ್ಯಾಚಾರ, ಕೊಲೆ: ಆರು ಆರೋಪಿಗಳ ಬಂಧನ
ಮುಝಫ್ಫರ್ ಪುರ್: ಮುಝಫ್ಫರ್ ಪುರ್ ಜಿಲ್ಲೆಯ ಗ್ರಾಮವೊಂದರಲ್ಲಿ ಛಿದ್ರಗೊಂಡ ದಲಿತ ಬಾಲಕಿಯ ಮೃತದೇಹ ಪತ್ತೆಯಾದ ನಂತರ, ಆರು ಮಂದಿಯನ್ನು ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಬಂಧಿಸಲಾಗಿದೆ. ಈ ಘಟನೆಯು ಬಿಹಾರದಲ್ಲಿ ರಾಜಕೀಯ ಬಿರುಗಾಳಿಗೆ ಕಾರಣವಾಗಿದ್ದು, ಆರೋಪಿಗಳನ್ನು ಶೀಘ್ರವೇ ಬಂಧಿಸಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸಿವೆ.
ಪೊಲೀಸರ ಪ್ರಕಾರ, ದಿನಗೂಲಿ ನೌಕರರ ಪುತ್ರಿಯಾದ ಬಾಲಕಿಯೊಬ್ಬಳು ಮಂಗಳವಾರ ಬೆಳಗ್ಗೆ ಗ್ರಾಮದ ಕೆರೆಯ ಬಳಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಆಗಸ್ಟ್ 11ರಂದು ಆಕೆ ತನ್ನ ಮನೆಗೆ ಮರಳುವ ಮಾರ್ಗದಲ್ಲಿ ಆಕೆಯನ್ನು ಅಡ್ಡಗಟ್ಟಿದ್ದ ಸಂಜಯ್ ರಾಯ್ ಹಾಗೂ ಆತನ ಸಹಚರರು ಆಕೆಯನ್ನು ತಮ್ಮೊಂದಿಗೆ ಬರುವಂತೆ ಬಲವಂತ ಪಡಿಸಿದ್ದರು ಹಾಗೂ ಆಕೆಯನ್ನು ಅಪಹರಿಸಿದ್ದರು ಎಂದು ಮೃತ ಬಾಲಕಿಯ ತಾಯಿ ದೂರಿನಲ್ಲಿ ಆರೋಪಿಸಿದ್ದಾರೆ. ದೂರುದಾರರ ಪ್ರಕಾರ, ಅವರು ನೆರೆಯ ಗ್ರಾಮದವರಾಗಿದ್ದಾರೆ.
ಶಂಕಿತ ಆರೋಪಿಗಳು ಸಶಸ್ತ್ರಧಾರಿಗಳಾಗಿದ್ದುದರಿಂದ, ಆ ಹೊತ್ತಿನಲ್ಲಿ ನನ್ನ ಪತಿ ಹಾಗೂ ಪುತ್ರ ಮನೆಯಲ್ಲೇ ಇದ್ದರೂ, ತನ್ನ ಪುತ್ರಿಯ ಅಪಹರಣವನ್ನು ತಪ್ಪಿಸಲಾಗಲಿಲ್ಲ ಎಂದೂ ದೂರುದಾರರು ದೂರು ನೀಡಿದ್ದಾರೆ.
“ನಾವು ದಲಿತರಾಗಿರುವುದರಿಂದ ರಾಯ್ ನಮಗೆ ಕಿರುಕುಳ ಕೊಡುತ್ತಿದ್ದರು ಹಾಗೂ ರಾಯ್ ಪ್ರಭಾವಿ ಯಾದವ ಕುಟುಂಬಕ್ಕೆ ಸೇರಿದವರಾಗಿದ್ದಾರೆ” ಎಂದು ದೂರುದಾರರು ಆರೋಪಿಸಿದ್ದಾರೆ.
ಇದರ ಬೆನ್ನಿಗೇ, ರಾಯ್ ಹಾಗೂ ಇನ್ನಿತರ ಐವರು ಅಪರಿಚಿತರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 70 (ಸಾಮೂಹಿಕ ಅತ್ಯಾಚಾರ) ಹಾಗೂ ಸೆಕ್ಷನ್ 103 (ಹತ್ಯೆ) ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಇದರೊಂದಿಗೆ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ, 1989ರ ಅಡಿಯೂ ಪ್ರಕರಣ ದಾಖಲಾಗಿದೆ. ಸದ್ಯ ರಾಯ್ ತಲೆಮರೆಸಿಕೊಂಡಿದ್ದಾನೆ.
ಮೃತ ಬಾಲಕಿಯ ಮರಣೋತ್ತರ ಪರೀಕ್ಷಾ ವರದಿಗಾಗಿ ನಿರೀಕ್ಷಿಸಲಾಗುತ್ತಿದ್ದು, ಅತ್ಯಾಚಾರ ನಡೆದಿರುವುದು ಈವರೆಗೆ ದೃಢಪಟ್ಟಿಲ್ಲ ಎಂದು ಮುಝಫ್ಫರ್ ಪುರ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರಾಕೇಶ್ ಕುಮಾರ್ ತಿಳಿಸಿದ್ದಾರೆ.
ಈ ಘಟನೆಯ ಬೆನ್ನಿಗೇ ನಿತೀಶ್ ಕುಮಾರ್ ಸರಕಾರದ ವಿರುದ್ಧ ವಿರೋಧ ಪಕ್ಷಗಳು ಮುಗಿ ಬಿದ್ದಿವೆ. ಈ ಕುರಿತು ಪ್ರತಿಕ್ರಿಯಿಸಿರುವ ಆರ್ಜೆಡಿ ನಾಯಕ ತೇಜಸ್ವಿ ಯಾದವ್, “ನಿತೀಶ್ ಕುಮಾರ್ ಆಡಳಿತದ ಮೇಲೆ ನಿಯಂತ್ರಣ ಕಳೆದುಕೊಳ್ಳುತ್ತಿದ್ದಾರೆ ಎಂಬುದಕ್ಕೆ ಈ ಭಯಾನಕ ಘಟನೆಯೇ ಸಾಕ್ಷಿ. ಹತ್ಯೆಗಳು, ಅತ್ಯಾಚಾರಗಳು ಹಾಗೂ ಇನ್ನಿತರ ಗಂಭೀರ ಅಪರಾಧಗಳು ಇತ್ತೀಚೆಗೆ ಸಾಮಾನ್ಯವಾಗಿವೆ” ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಘಟನೆಯನ್ನು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಹಾಗೂ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಕೂಡಾ ತೀವ್ರವಾಗಿ ಖಂಡಿಸಿದ್ದಾರೆ.