ಡಿಸ್ಲೆಕ್ಸಿಯ ಜಾಗೃತಿ ಅಭಿಯಾನ | ಕೆಂಪು ದೀಪಾಲಂಕಾರದಲ್ಲಿ ಕಂಗೊಳಿಸುತ್ತಿರುವ ರಾಷ್ಟ್ರಪತಿ ಭವನ

Update: 2024-10-28 14:52 GMT

Credit: X/UNinIndia

ಹೊಸದಿಲ್ಲಿ: ಡಿಸ್ಲೆಕ್ಸಿಯ ಸಮಸ್ಯೆ ಬಗ್ಗೆ ಜಾಗೃತಿ ಮೂಡಿಸುವ ಅಭಿಯಾನದ ಭಾಗವಾಗಿ ರಾಷ್ಟ್ರಪತಿ ಭವನ, ಸೌತ್ ಬ್ಲಾಕ್ ಹಾಗೂ ಸಂಸತ್ ಭವನ ಕೆಂಪು ದೀಪಾಲಂಕಾರದಲ್ಲಿ ಕಂಗೊಳಿಸುತ್ತಿವೆ.

ಡಿಸ್ಲೆಕ್ಸಿಯದಿಂದ ಕಲಿಕೆಯಲ್ಲಿ ಅಸಮರ್ಥತೆ ಎದುರಿಸುತ್ತಿರುವ ಭಾರತದ ಶೇ. 20ರಷ್ಟು ಜನಸಂಖ್ಯೆಯಲ್ಲಿ ಈ ಕುರಿತು ಜಾಗೃತಿ ಮೂಡಿಸುವ ಭಾಗವಾಗಿ ದೇಶಾದ್ಯಂತ ನಡೆಯುತ್ತಿರುವ ‘Act4Dyslexia’ ಅಭಿಯಾನದ ಪ್ರಯುಕ್ತ ಈ ದೀಪಾಲಂಕಾರ ಮಾಡಲಾಗಿದೆ. ಡಿಸ್ಲೆಕ್ಸಿಯ ಸಮಸ್ಯೆಯಿಂದ ಬಳಲುತ್ತಿರುವವರ ಪೈಕಿ 3.5 ಕೋಟಿ ವಿದ್ಯಾರ್ಥಿಗಳು ಸೇರಿದ್ದಾರೆ ಎಂದು ಸೋಮವಾರ ChangeInkk Foundation ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಪಾಟ್ನಾ, ರಾಂಚಿ, ಜೈಪುರ, ಕೊಹಿಮ, ಶಿಮ್ಲಾ ಹಾಗೂ ಮುಂಬೈ ಸೇರಿದಂತೆ ದೇಶದ ವಿವಿಧ ಪ್ರಮುಖ ನಗರಗಳಲ್ಲೂ ಈ ಬಗೆಯ ದೀಪಾಲಂಕಾರವನ್ನು ಮಾಡಲಾಗಿದ್ದು, ಡಿಸ್ಲೆಕ್ಸಿಯ ಬಗೆಗಿನ ಕೀಳರಿಮೆಯನ್ನು ಹೋಗಲಾಡಿಸಿ, ಅದನ್ನು ಅರ್ಥ ಮಾಡಿಕೊಳ್ಳಲು ಹೆಚ್ಚು ಒತ್ತು ನೀಡುವುದು ಹಾಗೂ ಕಲಿಕೆಯ ನ್ಯೂನತೆಯ ಮೇಲೆ ಬೆಳಕು ಚೆಲ್ಲುವುದು ಈ ಉಪಕ್ರಮದ ಉದ್ದೇಶವಾಗಿದೆ.

ಈ ಉಪಕ್ರಮದಲ್ಲಿ 4 ಲಕ್ಷ ಮಂದಿ ಪಾಲ್ಗೊಂಡಿದ್ದು, ಡಿಸ್ಲೆಕ್ಸಿಯ ಬಗ್ಗೆ ಜಾಗೃತಿ ಮೂಡಿಸಲು ಅವರೆಲ್ಲ ಇದವರೆಗೆ ಒಟ್ಟು 20 ಕೋಟಿ ಹೆಜ್ಜೆ ಹಾಕಿದ್ದಾರೆ ಎಂದು ಹೇಳಲಾಗಿದೆ.

ಈ ಪಾದಯಾತ್ರೆಯನ್ನು ಅಕ್ಟೋಬರ್ 8ರಿಂದ ಪ್ರಾರಂಭಿಸಲಾಗಿದ್ದು, 150ಕ್ಕೂ ಹೆಚ್ಚು ಸಂಘಟನೆಗಳ ಸಹಯೋಗದೊಂದಿಗೆ ರಾಜ್ಯ ಶಿಕ್ಷಣ ಇಲಾಖೆಗಳು, ಪೋಷಕರ ಸಂಘಟನೆಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳು ಹಮ್ಮಿಕೊಂಡಿವೆ. ಈ ಪಾದಯಾತ್ರೆ ಅಕ್ಟೋಬರ್ 30ರಂದು ಅಂತ್ಯಗೊಳ್ಳಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News