ಉತ್ತರಾಖಂಡದಲ್ಲಿ ಲಿಥಿಯಂ ಅಯಾನ್ ಬ್ಯಾಟರಿಗಳ ಪುನರ್ ಬಳಕೆ ಘಟಕ
ಹೊಸದಿಲ್ಲಿ: ದೇಶದ ಪ್ರಮುಖ ಖನಿಜ ಸಂಪನ್ಮೂಲಗಳ ಆಮದನ್ನು ಕಡಿಮೆ ಮಾಡುವ ಪ್ರಯತ್ನವಾಗಿ ಉತ್ತರಾಖಂಡದಲ್ಲಿ ದೇಶೀಯ ತಂತ್ರಜ್ಞಾನ ಬಳಸಿಕೊಂಡು ಲಿಥಿಯಂ ಅಯಾನ್ ಬ್ಯಾಟರಿಗಳು ಮತ್ತು ಇ- ತ್ಯಾಜ್ಯ ಪುನರ್ಬಳಕೆ ಘಟಕವನ್ನು ಆರಂಭಿಸುವ ಬಗ್ಗೆ ತಂತ್ರಜ್ಞಾನ ಅಭಿವೃದ್ಧಿ ಮಂಡಳಿ, ಖಾಸಗಿ ಕಂಪನಿಯೊಂದರ ಜತೆ ಒಪ್ಪಂದ ಮಾಡಿಕೊಂಡಿದೆ.
ಪ್ರಸ್ತುತ ಶೇಕಡ 95ರಷ್ಟು ಬ್ಯಾಟರಿಗಳನ್ನು ಬಳಕೆಯ ಬಳಿಕ ಎಸೆಯಲಾಗುತ್ತದೆ ಹಾಗೂ ಶೇಖಡ 5ರಷ್ಟು ಮಾತ್ರ ಪುನರ್ಬಳಕೆಯಾಗುತ್ತವೆ. 2030ರ ವೇಳೆಗೆ ಲಿಥಿಯಂ ಅಯಾನ್ ಬ್ಯಾಟರಿಗಳ ಪುನರ್ಬಳಕೆ ಮಾರುಕಟ್ಟೆ 15 ಶತಕೋಟಿ ಡಾಲರ್ ಗೆ ಹೆಚ್ಚುವ ನಿರೀಕ್ಷೆ ಇದ್ದು, ವಾರ್ಷಿಕ ಶೇಕಡ 21.6ರಷ್ಟು ವೇಗದಲ್ಲಿ ಬೆಳೆಯಲಿದೆ. 2021ರ ವೇಳಗೆ ಈ ಮಾರುಕಟ್ಟೆಯ ಗಾತ್ರ 3.8 ಶತಕೋಟಿ ಡಾಲರ್ ಆಗಿತ್ತು.
ಎಲ್ಐಬಿಗಳನ್ನು ಹೂಳೂವುದು ಮತ್ತು ದಹಿಸುವ ಪ್ರಕ್ರಿಯೆಯಿಂದ ಗಂಭೀರವಾದ ಪರಿಸರ ಮಾಲಿನ್ಯ ಹಾಗೂ ಆರೋಗ್ಯ ಸಮಸ್ಯೆಗಳ ಅಪಾಯವಿದೆ. ಆದ್ದರಿಂದ ಎಲ್ಐಬಿಗಳ ದಕ್ಷ ಪುನರ್ಬಳಕೆಯು, ಬ್ಯಾಟರಿಗಳ ಉತ್ಪಾದನೆಗೆ ಬಳಕೆಯಾಗುವ ಕಚ್ಚಾ ವಸ್ತುಗಳ ಪೂರಕ ಮೂಲವಾಗಲಿದ್ದು, ಆರೋಗ್ಯ ಅಪಾಯವನ್ನು ತಡೆಯುವಲ್ಲೂ ಇದು ನೆರವಾಗಲಿದೆ.
ಅಂತೆಯೇ ಇ-ತ್ಯಾಜ್ಯಗಳು ಕೂಡಾ ದೊಡ್ಡ ಸವಾಲಾಗಿದ್ದು, ದೇಶದಲ್ಲಿ ಶೇಕಡ 78ರಷ್ಟು ಇ-ತ್ಯಾಜ್ಯಗಳನ್ನು ಸಂಗ್ರಹಿಸುವ ವ್ಯವಸ್ಥೆ ಕೂಡಾ ಇಲ್ಲ. ಇದರಿಂದಾಗಿ ಚಿನ್ನ, ಬೆಳ್ಳಿ, ತಾಮ್ರದಂಥ ಅತ್ಯಧಿಕ ಮೌಲ್ಯದ ಪೂರಕ ಕಚ್ಚಾವಸ್ತುಗಳು ಕೂಡಾ ಡಂಪಿಂಗ್ ಯಾರ್ಡ್ ಗಳಲ್ಲಿ ರಾಶಿ ಬಿದ್ದಿವೆ. ವಿಶ್ವದಲ್ಲೇ ಭಾರತ ಪ್ರಸ್ತುತ ಮೂರನೇ ಅತಿದೊಡ್ಡ ಇ-ತ್ಯಾಜ್ಯ ಉತ್ಪಾದಕ ದೇಶವಾಗಿದೆ.
ತಂತ್ರಜ್ಞಾನ ಅಭಿವೃದ್ಧಿ ಮಂಡಳಿ, ರಿಮೈನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಜತೆ ಈ ಸಂಬಂಧ ಒಪ್ಪಂದ ಮಾಡಿಕೊಂಡಿದ್ದು, ಉತ್ತರಾಖಂಡದ ಉಧಾಂ ಸಿಂಗ್ ನಗರ ಜಿಲ್ಲೆಯ ಸಿತಾರ್ಗಂಜ್ ನಲ್ಲಿ ನೂತನ ಘಟಕ ಸ್ಥಾಪನೆಯಾಗಲಿದೆ. 15 ಕೋಟಿ ರೂಪಾಯಿ ಅಂದಾಜು ವೆಚ್ಚದ ಘಟಕ ಸ್ಥಾಪನೆಗೆ ಮಂಡಳಿ 7.5 ಕೋಟಿ ರೂಪಾಯಿ ನೀಡಲಿದೆ.