‘ಡೀಪ್ ಫೇಕ್’ ಸವಾಲು ನಿಭಾಯಿಸಲು ಶೀಘ್ರವೇ ನಿಯಮಾವಳಿ: ಸಚಿವ ವೈಷ್ಣವ್
Update: 2023-11-23 14:33 GMT
ಹೊಸದಿಲ್ಲಿ: ‘ಡೀಪ್ ಫೇಕ್’ ಸವಾಲನ್ನು ನಿಭಾಯಿಸಲು ಕೇಂದ್ರ ಸರಕಾರವು ಶೀಘ್ರದಲ್ಲೇ ನಿಯಮಾವಳಿಗಳನ್ನು ರೂಪಿಸಲಿದೆ ಎಂದು ಇಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
‘‘ಡೀಪ್ ಫೇಕ್ ಸಮಾಜದಲ್ಲಿ ಹೊಸ ಅಪಾಯವಾಗಿ ಪರಿಣಮಿಸಿದೆ’’ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು ಹೇಳಿದರು. ‘‘ನಾವು ತಕ್ಷಣ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ’’ ಎಂದು ಅವರು ಹೇಳಿದರು.
ಡೀಪ್ ಫೇಕ್ ಎಂದರೆ, ಕೃತಕ ಬುದ್ಧಿಮತ್ತೆ ತಂತ್ರಾಂಶ ಮೂಲಕ ಧ್ವನಿ ಮತ್ತು ದೃಶ್ಯಗಳನ್ನು ತಿರುಚಿ ಜನರು ಹೇಳಿರದ ಅಥವಾ ಮಾಡಿರದ ವಿಷಯಗಳನ್ನು ಹೇಳಿದಂತೆ ಅಥವಾ ಮಾಡಿದಂತೆ ತೋರಿಸುವ ತಂತ್ರಜ್ಞಾನ. ಎಷ್ಟು ಸಾಧ್ಯವೋ ಅಷ್ಟು ನೈಜವಾಗಿ ಕಾಣುವಂತೆ ಧ್ವನಿ ಮತ್ತು ದೃಶ್ಯಗಳನ್ನು ಸಂಯೋಜಿಸಲಾಗುತ್ತದೆ. ಸಾಮಾನ್ಯವಾಗಿ, ಕೆಟ್ಟ ಉದ್ದೇಶಕ್ಕಾಗಿ ಇದನ್ನು ಮಾಡಲಾಗುತ್ತದೆ.
ಎಡಿಟಿಂಗ್ ಸಾಫ್ಟ್ವೇರ್ ಮೂಲಕ ನಕಲಿ ಚಿತ್ರಗಳನ್ನು ತಯಾರಿಸುವುದು ಹಾಗೂ ಅಪಪ್ರಚಾರ ಮತ್ತು ತಪ್ಪುಪ್ರಚಾರಗಳಿಂದ ಈಗಾಗಲೇ ತುಂಬಿ ಹೋಗಿರುವ ಆನ್ಲೈನ್ ವ್ಯವಸ್ಥೆಗೆ ಇದು ಹೊಸ ಬೆದರಿಕೆಯಾಗಿದೆ.
ವೈಷ್ಣವ್ ಗುರುವಾರ, ಸಾಮಾಜಿಕ ಮಾಧ್ಯಮ ಕಂಪೆನಿಗಳ ಪ್ರತಿನಿಧಿಗಳು, ಕೃತಕ ಬುದ್ಧಿಮತ್ತೆ ಕ್ಷೇತ್ರದ ಪ್ರೊಫೆಸರ್ ಗಳು ಮತ್ತು ರಾಷ್ಟ್ರೀಯ ಸಾಫ್ಟ್ವೇರ್ ಮತ್ತು ಸೇವೆಗಳ ಕಂಪೆನಿಗಳ ಅಸೋಸಿಯೇಶನ್ಪ ತಿನಿಧಿಗಳೊಂದಿಗೆ ಸಭೆ ನಡೆಸಿದರು.
ಡೀಪ್ ಫೇಕ್ ಗಳನ್ನು ಪತ್ತೆಹಚ್ಚುವುದು, ಅವುಗಳು ಪ್ರಸಾರಗೊಳ್ಳುವುದನ್ನು ಹೇಗೆ ತಡೆಯುವುದು, ಅವುಗಳನ್ನು ವರದಿ ಮಾಡುವ ವ್ಯವಸ್ಥೆಯನ್ನು ಹೇಗೆ ಜಾರಿಗೊಳಿಸುವುದು ಮತ್ತು ಅದರ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿಸುವುದು- ಈ ನಾಲ್ಕು ಅಂಶಗಳ ಬಗ್ಗೆ ಗಮನ ಹರಿಸುವುದು ಈಗಿನ ಅಗತ್ಯವಾಗಿದೆ ಎಂದು ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ಹೇಳಿದರು.
ಡೀಪ್ ಫೇಕ್ ಗೆ ಸಂಬಂಧಿಸಿದ ನೂತನ ನಿಯಮಾವಳಿಗಳನ್ನು ರೂಪಿಸುವ ಕಾರ್ಯವನ್ನು ಮುಂದಿನ ವಾರಗಳಲ್ಲಿ ಪೂರ್ಣಗೊಳಿಸಲು ಪ್ರಯತ್ನಗಳನ್ನು ಮಾಡಲಾಗುವುದು ಎಂದು ವೈಷ್ಣವ್ ತಿಳಿಸಿದರು.
ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣರ ಡೀಪ್ಫೇಕ್ ಚಿತ್ರಗಳು ವೈರಲ್ ಆದ ಬಳಿಕ ಈ ಪಿಡುಗು ಮುನ್ನೆಲೆಗೆ ಬಂದಿದೆ. ಮೂಲ ವೀಡಿಯೊ ಬ್ರಿಟಿಶ್ -ಇಂಡಿಯನ್ ಸಾಮಾಜಿಕ ಮಾಧ್ಯಮ ತಾರೆ ಝರಾ ಪಟೇಲ್ ಅವರದ್ದಾಗಿತ್ತು. ವೈರಲ್ ಆದ ತಿರುಚಲ್ಪಟ್ಟ ವೀಡಿಯೊದಲ್ಲಿ ಪಟೇಲ್ ಚಿತ್ರಗಳಿಗೆ ರಶ್ಮಿಕಾ ತಲೆಯನ್ನು ಜೋಡಿಸಲಾಗಿತ್ತು.