'ಕೇಜ್ರಿವಾಲ್, ಹೇಮಂತ್ ಸೊರೆನ್ ರನ್ನು ತಕ್ಷಣವೇ ಬಿಡುಗಡೆ ಮಾಡಿ': ಇಂಡಿಯಾ ಒಕ್ಕೂಟದ ಐದು ಬೇಡಿಕೆ ಮುಂದಿಟ್ಟ ಪ್ರಿಯಾಂಕಾ ಗಾಂಧಿ
ಹೊಸದಿಲ್ಲಿ: ಮುಂಬರುವ ಲೋಕಸಭೆ ಚುನಾವಣೆಯ ಮೇಲೆ ಪ್ರಭಾವ ಬೀರಲು ಮತ್ತು ಪ್ರಜಾಪ್ರಭುತ್ವ ವಿರೋಧಿ ಅಡೆತಡೆಗಳನ್ನು ಸೃಷ್ಟಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ರವಿವಾರ ಟೀಕಿಸಿದ್ದಾರೆ.
ಇಂಡಿಯಾ ಒಕ್ಕೂಟದ ‘ಪ್ರಜಾತಂತ್ರ ಉಳಿಸಿʼ ರ್‍ಯಾಲಿಯಲ್ಲಿ ಮಾತನಾಡಿದ ಅವರು, ಮುಂಬರುವ ಚುನಾವಣೆಯ ಮೊದಲು ವಿಪಕ್ಷಗಳಿಗಿರುವ ಐದು ಬೇಡಿಕೆಗಳನ್ನು ಘೋಷಿಸಿದರು.
1. ಭಾರತೀಯ ಚುನಾವಣಾ ಆಯೋಗವು ಲೋಕಸಭೆ ಚುನಾವಣೆಯಲ್ಲಿ ಪಕ್ಷಾಪಾತಿಯಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕು
2. ಚುನಾವಣೆಯನ್ನು ದುರ್ಬಳಕೆ ಮಾಡುವ ಉದ್ದೇಶದಿಂದ ವಿರೋಧ ಪಕ್ಷಗಳ ವಿರುದ್ಧ ಮಾಡಿದ ಆದಾಯ ತೆರಿಗೆ, ಸಿಬಿಐ ಮತ್ತು ಈಡಿ ದಾಳಿಗಳನ್ನು ಚುನಾವಣಾ ಆಯೋಗ ತಡೆದು ನಿಲ್ಲಿಸಬೇಕು.
3. ಹೇಮಂತ್ ಸೋರೆನ್ ಮತ್ತು ಅರವಿಂದ್ ಕೇಜ್ರಿವಾಲ್ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು
4. ಆರ್ಥಿಕವಾಗಿ ವಿರೋಧ ಪಕ್ಷಗಳ ಕತ್ತು ಹಿಸುಕುವ ಪ್ರಯತ್ನವನ್ನು ನಿಲ್ಲಿಸಬೇಕು
5. ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿಯ ಹಣ ಸುಲಿಗೆ ಕುರಿತು ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯ ಎಸ್‌ಐಟಿ ರಚಿಸಬೇಕು
ಬಿಜೆಪಿಯು ಭ್ರಮೆಯಲ್ಲಿ ಸಿಕ್ಕಿಹಾಕಿಕೊಂಡಿದೆ ಎಂದು ಹೇಳಿದ ಪ್ರಿಯಾಂಕಾ, ರಾಮ-ರಾವಣರನ್ನು ಉಲ್ಲೇಖಿಸಿ ಬಿಜೆಪಿ ವಿರುದ್ಧ ಹರಿಹಾಯ್ದರು.
"ರಾಮ ಸತ್ಯಕ್ಕಾಗಿ ಹೋರಾಡುತ್ತಿದ್ದಾಗ, ಅವನ ಬಳಿ ಶಕ್ತಿ ಅಥವಾ ಸಂಪನ್ಮೂಲ ಇರಲಿಲ್ಲ, ಅವನ ಬಳಿ ರಥವೂ ಇರಲಿಲ್ಲ, ರಾವಣನಿಗೆ ರಥ, ಸಂಪನ್ಮೂಲಗಳು, ಸೈನ್ಯ ಮತ್ತು ಚಿನ್ನವಿತ್ತು. ರಾಮನಿಗೆ ಸತ್ಯ, ಭರವಸೆ, ನಂಬಿಕೆ, ನಮ್ರತೆ, ತಾಳ್ಮೆ ಮತ್ತು ಧೈರ್ಯ ಮಾತ್ರ ಇತ್ತು" ಎಂದು ಪ್ರಿಯಾಂಕಾ ಹೇಳಿದರು.