ಧಾರ್ಮಿಕ ಕಿರುಕುಳ, ಉದ್ಯೋಗ ಕೊರತೆ: ಅಕ್ರಮವಾಗಿ ಅಮೆರಿಕ ಗಡಿ ದಾಟುತ್ತಿರುವ ದಾಖಲೆ ಸಂಖ್ಯೆಯ ಭಾರತೀಯರು; ವರದಿ

Update: 2023-10-30 14:36 GMT

Photo : telegraphindia - ಸಾಂದರ್ಭಿಕ ಚಿತ್ರ 

ಹೊಸದಿಲ್ಲಿ: ಕಳೆದ ವರ್ಷದ ಅಕ್ಟೋಬರ್ ನಲ್ಲಿ ಆರಂಭಗೊಂಡು ಈ ವರ್ಷದ ಸೆಪ್ಟಂಬರ್ನಲ್ಲಿ ಅಂತ್ಯಗೊಂಡ ಹಣಕಾಸು ವರ್ಷದಲ್ಲಿ ಸುಮಾರು 42,000 ಭಾರತೀಯ ವಲಸಿಗರು ಅಮೆರಿಕದ ದಕ್ಷಿಣ ಗಡಿಯನ್ನು ಅಕ್ರಮವಾಗಿ ದಾಟಿದ್ದಾರೆ ಎಂದು ಯುಎಸ್ ಕಸ್ಟಮ್ಸ್ ಆ್ಯಂಡ್ ಬಾರ್ಡರ್ ಪ್ರೊಟೆಕ್ಷನ್ನ ದತ್ತಾಂಶಗಳನ್ನು ಉಲ್ಲೇಖಿಸಿ ʼವಾಲ್ ಸ್ಟ್ರೀಟ್ ಜರ್ನಲ್ʼ ವರದಿ ಮಾಡಿದೆ.

ವರದಿಯ ಪ್ರಕಾರ ಇದು ಅಮೆರಿಕದ ಗಡಿಯನ್ನು ಅಕ್ರಮವಾಗಿ ದಾಟಿದ ಭಾರತೀಯರ ಸಂಖ್ಯೆ ಸಾರ್ವಕಾಲಿಕ ಎತ್ತರಕ್ಕೇರಿದ್ದ ಹಿಂದಿನ ಆರ್ಥಿಕ ವರ್ಷದ ಇದೇ ಅವಧಿಗೆ ಹೋಲಿಸಿದರೆ ದುಪ್ಪಟ್ಟಿಗಿಂತಲೂ ಹೆಚ್ಚಾಗಿದೆ. ಅಕ್ಟೋಬರ್ 2021ರಿಂದ ಸೆಪ್ಟಂಬರ್ 2022ರ ಅವಧಿಯಲ್ಲಿ ಅಮೆರಿಕದ ಗಡಿ ಅಧಿಕಾರಿಗಳು ದೇಶದ ದಕ್ಷಿಣದ ಗಡಿಯಲ್ಲಿ ‘18,300 ಸಲ ’ಭಾರತೀಯ ವಲಸಿಗರನ್ನು ತಡೆದಿದ್ದರು. ಅದಕ್ಕೂ ಹಿಂದಿನ ವರ್ಷದಲ್ಲಿ ಇಂತಹ 2,600 ಘಟನೆಗಳು ದಾಖಲಾಗಿದ್ದವು.

ಸೆಪ್ಟಂಬರ್ ತಿಂಗಳೊಂದರಲ್ಲೇ ವಿವಿಧ ಮಾರ್ಗಗಳ ಮೂಲಕ ದೇಶವನ್ನು ಅಕ್ರಮವಾಗಿ ಪ್ರವೇಶಿಸಲು ಪ್ರಯತ್ನಿಸಿದ್ದ 8,076 ಭಾರತೀಯರನ್ನು ಅಮೆರಿಕದ ಕಾನೂನು ಜಾರಿ ಏಜೆನ್ಸಿಗಳು ಬಂಧಿಸಿವೆ. ಈ ಪೈಕಿ 3,059 ಭಾರತೀಯರನ್ನು ಅಮೆರಿಕ-ಕೆನಡಾ ಗಡಿಯೊಂದರಲ್ಲೇ ಬಂಧಿಸಲಾಗಿದೆ.

2007ರಿಂದ ಹಣಕಾಸು ವರ್ಷವೊಂದರಲ್ಲಿ ಭಾರತೀಯರಿಂದ ಅಕ್ರಮ ಗಡಿ ದಾಟುವಿಕೆಗಳ ಸಂಖ್ಯೆ ನಾಲ್ಕು ಸಲ ಮಾತ್ರ 5,000ವನ್ನು ದಾಟಿದೆ.

ಹೆಚ್ಚುಕಡಿಮೆ ಎಲ್ಲ ಭಾರತೀಯರು ಅಮೆರಿಕದಲ್ಲಿ ಆಶ್ರಯ ಕೋರಲು ಬಯಸುವುದರಿಂದ ತಮ್ಮನ್ನು ವಶಪಡಿಸಿಕೊಳ್ಳುವುದನ್ನು ತಪ್ಪಿಸಿಕೊಳ್ಳುವಾಗ ಬಂಧನಕ್ಕೊಳಗಾಗುವ ಬದಲು ಅವರು ಬಾರ್ಡರ್ ಪೆಟ್ರೋಲ್ಗೆ ತಮ್ಮನ್ನು ಒಪ್ಪಿಸಿಕೊಳ್ಳುತ್ತಾರೆ ಎಂದು ವರದಿಯು ತಿಳಿಸಿದೆ.

ಭಾರತದಿಂದ ವಲಸೆ ಬಂದವರಲ್ಲಿ ಸುಮಾರು ಶೇ.80ರಷ್ಟು ಜನರು ಒಂಟಿ ವಯಸ್ಕರಾಗಿದ್ದಾರೆ. ಅವರ ಪೈಕಿ ಹೆಚ್ಚಿನವರು ಭಾರತೀಯ ಪ್ರಜೆಗಳಿಗೆ ವೀಸಾ ಅಗತ್ಯವಿಲ್ಲದ ಅಥವಾ ಪ್ರಯಾಣ ವೀಸಾಗಳನ್ನು ನೀಡಲು ಸುಲಭ ಪ್ರಕ್ರಿಯೆಯನ್ನು ಹೊಂದಿರುವ ದೇಶಗಳ ಮೂಲಕ ‘ಡಾಂಕಿ ಫ್ಲೈಟ್ (ಸ್ಥಳದಿಂದ ಸ್ಥಳಕ್ಕೆ ಹಾರುವುದು)’ ವಿಧಾನದಿಂದ ಅರಿರೆನಾ ಮೂಲಕ ಅಮೆರಿಕವನ್ನು ಪ್ರವೇಶಿಸುತ್ತಾರೆ ಎಂದು ವರದಿಯು ಹೇಳಿದೆ. ಶಾರುಕ್ ಖಾನ್ ನಟನೆಯ ಮತ್ತು ರಾಜಕುಮಾರ ಹಿರಾನಿ ನಿರ್ದೇಶನದ ಮುಂಬರುವ ಬಾಲಿವುಡ್ ಚಿತ್ರ ‘ಡಂಕಿ ’ ಅಮೆರಿಕಕ್ಕೆ ಅಕ್ರಮ ವಲಸೆಗೆ ಬಳಕೆಯಾಗುವ ಈ ‘ಡಾಂಕಿ ಫ್ಲೈಟ್’ಗಳನ್ನು ಆಧರಿಸಿದೆ.

ಅಮೆರಿಕವನ್ನು ಅಕ್ರಮವಾಗಿ ಪ್ರವೇಶಿಸುವ ಭಾರತೀಯರ ಸಂಖ್ಯೆ ಹೆಚ್ಚುತ್ತಿರುವುದನ್ನು ವರದಿಯು ಪ್ರಮುಖವಾಗಿ ಬಿಂಬಿಸಿದೆ.

ರಾಜಕೀಯ ಮತ್ತು ಧಾರ್ಮಿಕ ಕಿರುಕುಳದ ಕಾರಣವನ್ನು ನೀಡಿ ಆಶ್ರಯವನ್ನು ಕೋರುವ ಭಾರತೀಯರ ಸಂಖ್ಯೆಯು ಹೆಚ್ಚುತ್ತಿದೆ, ಸಿಖ್ ಸಮುದಾಯದಲ್ಲಿ ಇಂತಹವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ ಎಂದು ವಲಸೆ ವಕೀಲ ದೀಪಕ ಅಹ್ಲುವಾಲಿಯಾ ತಿಳಿಸಿದರು. ತಮ್ಮ ಸ್ವಂತ ದೇಶದಲ್ಲಿ ಆರ್ಥಿಕ ಅವಕಾಶಗಳ ಕೊರತೆ ಅಮೆರಿಕಕ್ಕೆ ಭಾರತೀಯರ ಅಕ್ರಮ ವಲಸೆಗೆ ಇನ್ನೊಂದು ಕಾರಣವಾಗಿದೆ ಎಂದೂ ವರದಿಯು ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News