ಮಹಾರಾಷ್ಟ್ರ| ಮಸೀದಿ ಗೋಡೆಯಲ್ಲಿ ʼಶ್ರೀರಾಮ್‌ʼ ಬರೆದ ದುಷ್ಕರ್ಮಿಗಳು; ಪ್ರಕರಣ ದಾಖಲು

Update: 2024-03-26 09:35 GMT

ಬೀಡ್: ಕೆಲ ಅಪರಿಚಿತ ವ್ಯಕ್ತಿಗಳು ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಪ್ರಮುಖ ಮಸೀದಿಯೊಂದರ ಗೋಡೆಯ ಮೇಲೆ ಧಾರ್ಮಿಕ ಘೋಷಣೆಗಳನ್ನು ಬರೆದ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ಕೋಮು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಪೊಲೀಸರು ಈ ಸಂಬಂಧ ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಮಜಲ್‍ಗಾಂವ್‍ನ ಮರ್ಕಾಝಿ ಮಸೀದಿಯ ಗೋಡೆಯ ಮೇಲೆ ಸಂಜೆ ವೇಳೆ ಘೋಷಣೆಗಳನ್ನು ಬರೆಯಲಾಗಿದ್ದು, ಇದರಿಂದ ಕೋಪಗೊಂಡ ಸ್ಥಳೀಯ ಮುಸ್ಲಿಮರು ಗುಂಪು ಸೇರಿ ಮಸೀದಿ ಎದುರು ಮತ್ತು ಠಾಣೆಯ ಎದುರು ಪ್ರತಿಭಟನೆ ಆರಂಭಿಸಿದರು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.

ಸಂಜೆ 5 ಗಂಟೆಯ ಸುಮಾರಿಗೆ ಕೆಲ ಕಿಡಿಗೇಡಿಗಳು ಮಸೀದಿಯ ಗೋಡೆಯ ಮೇಲೆ ಶ್ರೀರಾಮ ಎಂದು ಬರೆದಿದ್ದಾರೆ. ಭಾರತೀಯ ದಂಡಸಂಹಿತೆ ಸೆಕ್ಷನ್ 295ರ ಅನ್ವಯ ಪ್ರಾರ್ಥನಾ ಸ್ಥಳವನ್ನು ಉದ್ದೇಶಪೂರ್ವಕವಾಗಿ ವಿರೂಪಗೊಳಿಸಿದ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿದೆ. ಕಿಡಿಗೇಡಿಗಳ ಜಾಡು ಹಿಡಿಯಲಾಗಿದ್ದು, ಶೀಘ್ರವೇ ಅವರನ್ನು ಬಂಧಿಸುವ ವಿಶ್ವಾಸವಿದೆ ಎಂದು ಮಜಲ್‍ಗಾಂವ್ ಉಪವಿಭಾಗ ಪೊಲೀಸ್ ಅಧಿಕಾರಿ ಧೀರಜ್ ಕುಮಾರ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News