ಖ್ಯಾತ ವನ್ಯಜೀವಿ ಛಾಯಾಗ್ರಾಹಕ ಆದಿತ್ಯ ಸಿಂಗ್ ನಿಧನ: ರಣಥಂಭೋರ್ ನಲ್ಲಿ ನೀರವ ಮೌನ
ಹೊಸದಿಲ್ಲಿ: ರಾಜಸ್ಥಾನದ ರಣಥಂಭೋರ್ ಹುಲಿ ರಕ್ಷಿತಾರಣ್ಯದ ಹೊರವಲಯದಲ್ಲಿರುವ ತಮ್ಮ ನಿವಾಸದಲ್ಲಿ ಖ್ಯಾತ ವನ್ಯಜೀವಿ ಸಂರಕ್ಷಕ ಹಾಗೂ ಛಾಯಾಗ್ರಾಹಕ ಆದಿತ್ಯ ‘ಡಿಕ್ಕಿ’ ಸಿಂಗ್ (57) ನಿಧನರಾಗಿದ್ದಾರೆ ಎಂದು newindianexpress.com ವರದಿ ಮಾಡಿದೆ.
ಈ ಕುರಿತು PTI ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ಆದಿತ್ಯ ‘ಡಿಕ್ಕಿ’ ಸಿಂಗ್ ಅವರ ಕುಟುಂಬದ ಗೆಳೆಯ ಧರ್ಮೇಂದ್ರ ಖಂಡಾಲ್, “ಕೆಲ ವಾರಗಳ ಹಿಂದೆ ಲಘು ಹೃದಯಾಘಾತಕ್ಕೆ ತುತ್ತಾಗಿ ಶಸ್ತ್ರಚಿಕಿತ್ಸೆಗೊಳಗಾದ ನಂತರ ಮನೆಗೆ ಮರಳಿದ್ದ ಆದಿತ್ಯ ಸಿಂಗ್, ಶೀಘ್ರವಾಗಿ ಚೇತರಿಸಿಕೊಳ್ಳುತ್ತಿದ್ದರು. ನಿನ್ನೆ ಎಂದಿನಂತೆ ಸಹಜ ದಿನವಾಗಿತ್ತು ಹಾಗೂ ಎಂದಿನಂತೆ ಆತ ಎಲ್ಲರೊಂದಿಗೂ ತುಂಬಾ ಉಲ್ಲಾಸದಿಂದ ಮಾತನಾಡುತ್ತಿದ್ದ. ಆದರೆ, ಇಂದು ಮುಂಜಾನೆಯ ಸಮಯದಲ್ಲಿ ಆತ ನಿದ್ರೆಯಲ್ಲಿ ಮೃತಪಟ್ಟಿರುವಂತೆ ಕಾಣುತ್ತಿದೆ” ಎಂದು ತಿಳಿಸಿದ್ದಾರೆ.
ಭಾರತೀಯ ನಾಗರಿಕ ಸೇವೆಗಳ ಮಾಜಿ ಅಧಿಕಾರಿಯಾಗಿದ್ದ ಆದಿತ್ಯ ಸಿಂಗ್, ತಮ್ಮ ಅಧಿಕಾರಶಾಹಿ ವೃತ್ತಿ ಜೀವನವನ್ನು ತೊರೆದು, 1988ರಲ್ಲಿ ರಣಥಂಭೋರ್ ಗೆ ಬಂದಿದ್ದರು. ಅಲ್ಲಿ ಸರ್ಕಾರಿ ಸ್ವತ್ತೊಂದನ್ನು ಭೋಗ್ಯಕ್ಕೆ ಪಡೆದು, ಅದಕ್ಕೆ ಹೊಂದಿಕೊಂಡಂತೆ ಇದ್ದ ಸುಮಾರು 40 ಎಕರೆ ಕೃಷಿ ಭೂಮಿಯನ್ನು ಖರೀದಿಸಿ, ರಣಥಂಭೋರ್ ಹುಲಿ ರಕ್ಷಿತಾರಣ್ಯದ ಅಂಚಿನಲ್ಲಿ ಮೀಸಲು ಅರಣ್ಯವನ್ನು ಅಭಿವೃದ್ಧಿಪಡಿಸಿದ್ದರು.
“ಮರು ಅರಣ್ಯೀಕರಣ ಯೋಜನೆಯನ್ನು ತೀವ್ರ ವ್ಯಾಮೋಹದಿಂದ ಕೈಗೆತ್ತಿಕೊಂಡಿದ್ದ ಆದಿತ್ಯ ಸಿಂಗ್, ಹಲವಾರು ಅಪರೂಪದ ಸಸ್ಯ ಪ್ರಭೇದಗಳೊಂದಿಗೆ ಸ್ಥಳೀಯ ಮರಗಳನ್ನು ನೆಟ್ಟು, ಆ ಪ್ರದೇಶವನ್ನು ಕಿರು ಅರಣ್ಯವನ್ನಾಗಿ ಪರಿವರ್ತಿಸಿದ್ದರು. ತಮ್ಮ ಅರಣ್ಯ ಸಂರಕ್ಷಣೆ ಕೆಲಸದಿಂದ ಅವರು ಹಲವಾರು ಜನರನ್ನು ಪ್ರೇರೇಪಿಸಿದ್ದರು. ಅವರು ಒಂಟಿ ಹುಲಿಗಳನ್ನು ನಿಯಮಿತವಾಗಿ ಹಿಂಬಾಲಿಸುವ ಸಂಸ್ಕೃತಿಯನ್ನು ವನ್ಯಜೀವಿ ಸಂರಕ್ಷಕರಲ್ಲಿ ಬೆಳೆಸಿದ್ದರು” ಎಂದು ವನ್ಯಜೀವಿ ಸಂರಕ್ಷಣಾ ಜೀವ ವಿಜ್ಞಾನಿ ಖಂದಾಲ್ ತಿಳಿಸಿದ್ದಾರೆ.
ಆದಿತ್ಯ ಸಿಂಗ್ ತಮ್ಮ ಪತ್ನಿ ಪೂನಂ ಹಾಗೂ 11 ವರ್ಷ ವಯಸ್ಸಿನ ಪುತ್ರಿ ನೈರಾ ಅವರನ್ನು ಅಗಲಿದ್ದಾರೆ.