ಚಿಲ್ಲರೆ ಹಣದುಬ್ಬರ ಮೂರು ತಿಂಗಳಲ್ಲೇ ಗರಿಷ್ಠ

Update: 2023-12-13 02:25 GMT

ಹೊಸದಿಲ್ಲಿ: ತರಕಾರಿ ಸೇರಿದಂತೆ ಆಹಾರ ಧಾನ್ಯಗಳ ಬೆಲೆಯಲ್ಲಿ ಗಣನೀಯ ಏರಿಕೆಯಿಂದಾಗಿ, ದೇಶದಲ್ಲಿ ನವೆಂಬರ್ ತಿಂಗಳ ಚಿಲ್ಲರೆ ಹಣದುಬ್ಬರ ದರ ಮೂರು ತಿಂಗಳಲ್ಲೇ ಗರಿಷ್ಠ ಮಟ್ಟವನ್ನು ತಲುಪಿದೆ. ಉತ್ತಮ ಉತ್ಪಾದನೆ, ವಿದ್ಯುತ್ ಹಾಗೂ ಗಣಿಗಾರಿಕೆ ವಲಯ ವಿಸ್ತರಣೆಯಿಂದಾಗಿ ಕೈಗಾರಿಕಾ ಉತ್ಪಾದನೆ ಅಕ್ಟೋಬರ್ ತಿಂಗಳಲ್ಲಿ 16 ತಿಂಗಳ ಗರಿಷ್ಠ ಮಟ್ಟವನ್ನು ತಲುಪಿರುವ ಅಂಶವೂ ಮಂಗಳವಾರ ಬಿಡುಗಡೆಯಾದ ಅಂಕಿ ಅಂಶಗಳಿಂದ ತಿಳಿದು ಬರುತ್ತದೆ.

ನವೆಂಬರ್ ತಿಂಗಳಲ್ಲಿ ಗ್ರಾಹಕ ಬೆಲೆ ಸೂಚ್ಯಂಕದಿಂದ ಮಾಪನ ಮಾಡಲಾಗುವ ಹಣದುಬ್ಬರ ದರ ಶೇಕಡ 5.6ನ್ನು ತಲುಪಿದ್ದು, ಇದು ಅಕ್ಟೋಬರ್ ತಿಂಗಳಲ್ಲಿ ಶೇಕಡ 4.9 ಆಗಿತ್ತು. ಆದರೆ 2022ರ ನವೆಂಬರ್ ನಲ್ಲಿ ದಾಖಲಾದ ಶೇಕಡ 5.9ಕ್ಕೆ ಹೋಲಿಸಿದರೆ ಇದು ತುಸು ಕಡಿಮೆ.

ಆಹಾರ ಬೆಲೆ ಸೂಚ್ಯಂಕ ಶೇಕಡ 8.7ರಷ್ಟು ಹೆಚ್ಚಳ ಕಂಡಿದ್ದು, ಇದು ಅಕ್ಟೋಬರ್ ನಲ್ಲಿ ಶೇಕಡ 6.6 ಆಗಿತ್ತು. ಶೇಕಡ 5.9ರಷ್ಟಿರುವ ಗ್ರಾಮೀಣ ಹಣದುಬ್ಬರ ದರ ನಗರ ಹಣದುಬ್ಬರ (5.3%)ಕ್ಕಿಂತ ಅಧಿಕ. ನವೆಂಬರ್ ನಲ್ಲಿ ತರಕಾರಿ ಬೆಲೆ ಶೇಕಡ 17.7ರಷ್ಟು ಹೆಚ್ಚಿದ್ದರೆ, ಬೇಳೆಕಾಳುಗಳ ದರ ಶೇಕಡ 20.2ರಷ್ಟು ಅಧಿಕವಾಗಿದೆ. ಜೂನ್‍ನಲ್ಲಿ ಶೇಕಡ 1.7 ಇದ್ದ ಈರುಳ್ಳಿ ಹಣದುಬ್ಬರ ನವೆಂಬರ್ ನಲ್ಲಿ ಶೇಕಡ 87ಕ್ಕೆ ಹೆಚ್ಚಿದೆ.

ಭರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತದಾಸ್ ಅವರು ತಮ್ಮ ವಿತ್ತೀಯನೀತಿ ಹೇಳಿಕೆಯಲ್ಲಿ ಕಳೆದ ವಾರ, ನೀತಿಯನ್ನು ಸಡಿಲಗೊಳಿಸುವ ಯಾವುದೇ ಸಾಧ್ಯತೆ ಇಲ್ಲ ಎಂದು ಎಚ್ಚರಿಕೆ ನೀಡಿದ್ದರು. ಮುಖ್ಯವಾಗಿ ಊಹಿಸಲಾಗದ ಅಹಾರ ಬೆಲೆ ಕಾರಣದಿಂದ ಭವಿಷ್ಯದ ಹಣದುಬ್ಬರ ನಿರ್ವಹಣೆ ಬಗೆಗಿನ ಅನಿಶ್ಚಿತತೆ ಬಗ್ಗೆಯೂ ಎಚ್ಚರ ನೀಡಿದ್ದರು ಮತ್ತು ನವೆಂಬರ್ ತಿಂಗಳ ಗ್ರಾಹಕ ಬೆಲೆ ಸೂಚ್ಯಂಕ ಹೆಚ್ಚುವ ಸಾಧ್ಯತೆಯನ್ನು ಅಂದಾಜಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News