ಮರುಪರೀಕ್ಷೆ ನಮ್ಮ ಕೊನೆಯ ಆಯ್ಕೆ, ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಸಮಿತಿ ತನಿಖೆ ನಡೆಸಬೇಕು:ನೀಟ್ ಕುರಿತು ಸುಪ್ರೀಂ ಕೋರ್ಟ್
Update: 2024-07-08 10:29 GMT
ಹೊಸದಿಲ್ಲಿ: ನೀಟ್-ಯುಜಿ ಮರುಪರೀಕ್ಷೆಗಾಗಿ ಬೇಡಿಕೆಗಳನ್ನು ಸದ್ಯ ಪಕ್ಕಕ್ಕಿರಿಸಿರುವ ಸರ್ವೋಚ್ಚ ನ್ಯಾಯಾಲಯವು,ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಸಮಿತಿಯು ತನಿಖೆ ನಡೆಸಬೇಕು ಎಂದು ಹೇಳಿದೆ. ಮರು ಪರೀಕ್ಷೆಯು ತನ್ನ ಕೊನೆಯ ಆಯ್ಕೆಯಾಗಿದೆ ಎಂದು ಅದು ಸ್ಪಷ್ಟಪಡಿಸಿದೆ.
ಮೇ 5ರಂದು ಪರೀಕ್ಷೆಗೆ ಕನಿಷ್ಠ 24 ಗಂಟೆಗಳ ಮೊದಲು ಸಾಮಾಜಿಕ ಮಾಧ್ಯಮಗಳು ಮತ್ತು ಟೆಲಿಗ್ರಾಂ ಹಾಗೂ ವಾಟ್ಸ್‌ಆ್ಯಪ್‌ನಂತಹ ಜನಪ್ರಿಯ ಮೆಸೇಜಿಂಗ್ ಆ್ಯಪ್‌ಗಳ ಮೂಲಕ ಪ್ರಶ್ನೆಗಳು ಸೋರಿಕೆಯಾಗಿದ್ದನ್ನು ನ್ಯಾಯಾಲಯವು ಒಪ್ಪಿಕೊಂಡಿತು, ಆದರೆ ಸೋರಿಕೆಯಾಗಿದ್ದ ಪ್ರಶ್ನೆಗಳ ಹರಡುವಿಕೆಯ ಬಗ್ಗೆ ಸ್ಪಷ್ಟತೆಯ ಕೊರತೆಯನ್ನು ಬೆಟ್ಟು ಮಾಡಿತು.
ಎಷ್ಟು ವಿದ್ಯಾರ್ಥಿಗಳು ವಂಚಿಸಿದ್ದರು ಎನ್ನುವುದನ್ನು ತಿಳಿದುಕೊಳ್ಳದೆ ಮರುಪರೀಕ್ಷೆಗೆ ಆದೇಶಿಸುವುದು ವಂಚನೆಯನ್ನು ನಡೆಸದ ಲಕ್ಷಾಂತರ ವಿದ್ಯಾರ್ಥಿಗಳ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠವು ತಿಳಿಸಿತು.