‘ದ ವಯರ್’ನ ಸಲಕರಣೆಗಳನ್ನು ವಾಪಸ್ ಕೊಡಿ; ಪೊಲೀಸರಿಗೆ ದಿಲ್ಲಿ ನ್ಯಾಯಾಲಯ ಆದೇಶ
ಹೊಸದಿಲ್ಲಿ : ಸುದ್ದಿ ವೆಬ್‍ಸೈಟ್ ‘ದ ವಯರ್’ನಿಂದ ಕಳೆದ ವರ್ಷದ ಅಕ್ಟೋಬರ್ ನಲ್ಲಿ ವಶಪಡಿಸಿಕೊಂಡಿರುವ ಇಲೆಕ್ಟ್ರಾನಿಕ್ ಸಲಕರಣೆಗಳನ್ನು ವಾಪಸ್ ಕೊಡುವಂತೆ ದಿಲ್ಲಿಯ ನ್ಯಾಯಾಲಯವೊಂದು ಶನಿವಾರ ಪೊಲೀಸರಿಗೆ ನಿರ್ದೇಶನ ನೀಡಿದೆ.
ಸುದ್ದಿ ವೆಬ್‍ಸೈಟ್‍ನ ಕಚೇರಿ ಹಾಗೂ ಅದರ ನಾಲ್ವರು ಸಂಪಾದಕರಾದ ಸಿದ್ಧಾರ್ಥ ವರದರಾಜನ್, ಎಮ್.ಕೆ. ವೇಣು, ಸಿದ್ಧಾರ್ಥ ಭಾಟಿಯ ಮತ್ತು ಜಾಹ್ನವಿ ಸೇನ್‍ರ ಮನೆಗಳ ಶೋಧನೆಯ ವೇಳೆ ಪೊಲೀಸರು ಈ ಇಲೆಕ್ಟ್ರಾನಿಕ್ ಸಲಕರಣೆಗಳನ್ನು ವಶಪಡಿಸಿಕೊಂಡಿದ್ದರು.
ಬಿಜೆಪಿ ನಾಯಕ ಅಮಿತ್ ಮಾಳವೀಯ ಸಲ್ಲಿಸಿದ ದೂರಿನ ಆಧಾರದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ಬಳಿಕ ಈ ಸಲಕರಣೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಸಂಪಾದಕರು ವಂಚನೆ, ನಕಲಿ, ಮಾನಹಾನಿ ಮತ್ತು ಕ್ರಿಮಿನಲ್ ಪಿತೂರಿ ನಡೆಸಿದ್ದಾರೆ ಎಂಬುದಾಗಿ ದೂರುದಾರರು ಆರೋಪಿಸಿದ್ದರು.
ಈ ಸಂಪಾದಕರ ಇಲೆಕ್ಟ್ರಾನಿಕ್ ಸಲಕರಣೆಗಳು ತುಂಬಾ ಸಮಯದಿಂದ ಪೊಲೀಸರ ವಶದಲ್ಲಿವೆ ಹಾಗೂ ಅವುಗಳನ್ನು ಇನ್ನೂ ತಮ್ಮ ವಶದಲ್ಲಿಟ್ಟುಕೊಳ್ಳಲು ಪೊಲೀಸರಿಗೆ ಕಾರಣಗಳಿಲ್ಲ ಎಂದು ತೀಸ್ ಹಝಾರಿ ನ್ಯಾಯಾಲಯದ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸಿದ್ಧಾರ್ಥ ಮಲಿಕ್ ಅಭಿಪ್ರಾಯಪಟ್ಟರು.
“ಈ ಸಲಕರಣೆಗಳು ಮುಂದಿನ ಯಾವುದಾದರೂ ತನಿಖೆಗೆ ಮತ್ತೆ ಬೇಕಾಗಬಹುದು ಎಂಬುದಾಗಿ ತನಿಖಾಧಿಕಾರಿ ಹೇಳಿದ್ದಾರೆ. ಮುಂದೆ ಯಾವುದಾದರೂ ಹೊಸ ಸಂಗತಿ ಬೆಳಕಿಗೆ ಬಂದರೆ ಆ ತನಿಖೆಗೆ ಬೇಕಾಗಬಹುದು ಎಂದು ಅವರು ಹೇಳುತ್ತಿದ್ದಾರೆ. ಆದರೆ ಅವರ ವಾದವು ಊಹೆಯಾಗಿದೆ. ಹೊಸ ಸಂಗತಿ ಬೆಳಕಿಗೆ ಬರಹುದು, ಬರದೆ ಇರಬಹುದು’’ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು.
ವಶಪಡಿಸಿಕೊಳ್ಳಲಾಗಿರುವ ಇಲೆಕ್ಟ್ರಾನಿಕ್ ಸಲಕರಣೆಗಳ ಯಥಾ ಪ್ರತಿಗಳು ವಿಧಿವಿಜ್ಞಾನ ಪ್ರಯೋಗಾಲಯದಲ್ಲಿವೆ ಎಂದು ಹೇಳಿದ ಅವರು, ಈ ಸಲಕರಣೆಗಳನ್ನು 15 ದಿನಗಳೊಳಗೆ ಹಿಂದಿರುಗಿಸುವಂತೆ ಪೊಲೀಸರಿಗೆ ಆದೇಶಿಸಿದರು.
ಇನ್‍ಸ್ಟಾಗ್ರಾಮ್‍ನಲ್ಲಿ ಪ್ರಕಟಗೊಳ್ಳುವ ಯಾವುದಾದರೂ ಸಂದೇಶ ಸರಿ ಇಲ್ಲ ಎಂಬುದಾಗಿ ಅಮಿತ್ ಮಾಳವೀಯ ವರದಿ ಮಾಡಿದರೆ, ಅವುಗಳು ತಕ್ಷಣ ಅಳಿಸಿ ಹೋಗುತ್ತವೆ; ಇದಕ್ಕಾಗಿ ಅವರು ಎಕ್ಸ್-ಚೆಕ್ ಎಂಬ ಇನ್‍ಸ್ಟಾಗ್ರಾಮ್ ಪ್ರೋಗ್ರಾಮ್ ಬಳಸುತ್ತಾರೆ ಎಂದು ಹೇಳುವ ಲೇಖನಗಳನ್ನು ‘ದ ವಯರ್’ ಪ್ರಕಟಿಸಿತ್ತು. ಇದರ ವಿರುದ್ಧ ಮಾಳವೀಯ ದೂರು ನೀಡಿದ್ದರು.
ಆದರೆ, ಅದು ಕಳೆದ ವರ್ಷದ ಅಕ್ಟೋಬರ್ 23ರಂದು ಆ ಲೇಖನಗಳನ್ನು ವಾಪಸ್ ಪಡೆದುಕೊಂಡಿತ್ತು. ಈ ವಿಷಯದಲ್ಲಿ ತನ್ನ ತನಿಖಾ ತಂಡದ ಓರ್ವ ಸದಸ್ಯ ವಂಚಿಸಿದ್ದಾನೆ ಎಂದು ಅದು ಹೇಳಿಕೊಂಡಿತ್ತು.
ಅಕ್ಟೋಬರ್ 29ರಂದು ‘ದ ವಯರ್’ ಸಂಶೋಧಕ ದೇವೇಶ್ ಕುಮಾರ್ ವಿರುದ್ಧ ಪೊಲೀಸರಿಗೆ ದೂರನ್ನೂ ನೀಡಿತ್ತು. “ದ ವಯರ್ ಪ್ರತಿಷ್ಠೆಯನ್ನು ಹಾಳುಗೆಡಹುವ ಉದ್ದೇಶದಿಂದ ಆತನು ಸುಳ್ಳು ದಾಖಲೆಗಳು, ಇಮೇಲ್‍ಗಳು ಮತ್ತು ವೀಡಿಯೊಗಳನ್ನು ಸೃಷ್ಟಿಸಿ ಒದಗಿಸಿದ್ದನು’’ ಎಂದು ಅದು ಆರೋಪಿಸಿತ್ತು.