ಮಣಿಪುರದಲ್ಲಿ ಶಂಕಿತ ಉಗ್ರರಿಂದ ರಾಕೆಟ್ ದಾಳಿ: ಎರಡು ಕಟ್ಟಡಗಳಿಗೆ ಹಾನಿ

Update: 2024-09-06 07:30 GMT

Photo: NDTV

ಇಂಫಾಲ: ಶುಕ್ರವಾರ ಬೆಳಗ್ಗೆ ಶಂಕಿತ ಉಗ್ರರು ಬಾಂಬ್ ದಾಳಿ ನಡೆಸಿರುವ ಘಟನೆ ಮಣಿಪುರದ ಬಿಷ್ಣುಪುರ್‌ ಜಿಲ್ಲೆಯಲ್ಲಿ ನಡೆದಿದ್ದು, ಈ ಘಟನೆಯಲ್ಲಿ ಕನಿಷ್ಠ ಪಕ್ಷ ಎರಡು ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಚುರಾಚಂದ್‌ಪುರ್ ಜಿಲ್ಲೆಯ ಗಿರಿಪ್ರದೇಶಗಳ ಎತ್ತರದ ಭಾಗದಿಂದ ರಾಜ್ಯ ರಾಜಧಾನಿ ಇಂಫಾಲದಿಂದ ಸುಮಾರು 45 ಕಿ.ಮೀ. ದೂರ ಇರುವ ತಗ್ಗು ಪ್ರದೇಶವಾದ ಟ್ರಾಂಗ್ಲೌಬಿಯ ವಸತಿ ಪ್ರದೇಶದ ಮೇಲೆ ಕ್ಷಿಪಣಿಯನ್ನು ಅನ್ನು ಉಡಾಯಿಸಲಾಗಿದೆ. ಈ ಕ್ಷಿಪಣಿಗಳ ವ್ಯಾಪ್ತಿ 3 ಕಿಮೀ ಇತ್ತು ಎಂದು ಪೊಲೀಸರು ಹೇಳಿದ್ದಾರೆ.

ಅದೃಷ್ಟವಶಾತ್ ಈ ದಾಳಿಯಲ್ಲಿ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ಆದರೆ, ಈ ದಾಳಿಯಲ್ಲಿ ಸ್ಥಳೀಯ ಸಮುದಾಯ ಭವನ ಹಾಗೂ ಖಾಲಿ ಕೋಣೆಯೊಂದಕ್ಕೆ ಹಾನಿಯಾಗಿದೆ ಎಂದೂ ಪೊಲೀಸರು ತಿಳಿಸಿದ್ದಾರೆ.

ಇದರೊಂದಿಗೆ, ಶಂಕಿತ ಉಗ್ರರು ಬಿಷ್ಣುಪುರ್ ಜಿಲ್ಲೆಯತ್ತ ಹಲವು ಸುತ್ತಿನ ಗುಂಡಿನ ದಾಳಿಯನ್ನೂ ನಡೆಸಿದ್ದು, ಅದಕ್ಕೆ ಪ್ರತಿಯಾಗಿ ಭದ್ರತಾ ಪಡೆಗಳೂ ಪ್ರತಿ ದಾಳಿ ನಡೆಸಿವೆ.

ಟ್ರಾಂಗ್ಲೌಬಿಯಿಂದ ಕೆಲವೇ ಕಿಲೋಮೀಟರ್ ದೂರ ಇರುವ ಕುಂಬಿ ಗ್ರಾಮದಲ್ಲಿ ಗುರುವಾರ ರಾತ್ರಿ ಕೇವಲ 100 ಅಡಿ ಎತ್ತರದಲ್ಲಿ ಡ್ರೋನ್‌ಗಳು ಹಾರಾಡುತ್ತಿರುವುದು ಕಂಡು ಬಂದಿದ್ದರಿಂದ, ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News