ಪುಟ್ಟ ಮಗುವಿನ ಅಂತ್ಯಕ್ರಿಯೆಗಾಗಿ ರೋಹಿಂಗ್ಯಾ ದಂಪತಿಯನ್ನು ಕೈಕೋಳದೊಂದಿಗೆ ಕರೆದೊಯ್ದ ಪೊಲೀಸರು
ಹೊಸದಿಲ್ಲಿ: ಜಮ್ಮುವಿನಲ್ಲಿ ತಮ್ಮ ಐದು ತಿಂಗಳ ಪುತ್ರಿಯ ಅಂತ್ಯಕ್ರಿಯೆಗಾಗಿ ರೋಹಿಂಗ್ಯಾ ದಂಪತಿಗಳು ಕೈಕೋಳಗಳಲ್ಲಿಯೇ ಹಾಜರಾಗಿದ್ದರು ಎಂದು ವರದಿಯೊಂದು ತಿಳಿಸಿದೆ.
ಮ್ಯಾನ್ಮಾರ್ ನ ರೋಹಿಂಗ್ಯಾ ನಿರಾಶ್ರಿತರಾಗಿರುವ ಮುಹಮ್ಮದ್ ಸಲೀಂ (40) ಮತ್ತು ಅವರ ಪತ್ನಿ ನುಮಿನಾ ಜಮ್ಮು-ಕಾಶ್ಮೀರದ ಕಥುವಾ ಜಿಲ್ಲೆಯ ಹಿರಾನಗರ ದಿಗ್ಬಂಧನ ಕೇಂದ್ರದಲ್ಲಿದ್ದಾರೆ. ದಂಪತಿ ಮೂವರು ಮಕ್ಕಳನ್ನು ಹೊಂದಿದ್ದಾರೆ.
ಮಂಗಳವಾರ ಕೇಂದ್ರದಲ್ಲಿಯ ಪ್ರತಿಭಟನಾನಿರತ ನಿರಾಶ್ರಿತರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದರು. ದಂಪತಿಯ ಮಗು ಹಬೀಬಾ ಅದರ ಹೊಗೆಯನ್ನು ಸೇವಿಸಿದ್ದು, ಸಂಜೆಯ ವೇಳೆಗೆ ತೀವ್ರ ಅಸ್ವಸ್ಥಗೊಂಡಿತ್ತು. ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು,ಮರುದಿನ ಕೊನೆಯುಸಿರೆಳೆದಿತ್ತು ಎಂದು ದಂಪತಿಯ ನಿಕಟ ಸಂಬಂಧಿಗಳನ್ನು ಉಲ್ಲೇಖಿಸಿ ಮಾಧ್ಯಮ ವರದಿಯು ತಿಳಿಸಿದೆ.
ತಮ್ಮ ಸಂಬಂಧಿಕರು ವಾಸವಾಗಿರುವ ನರ್ವಾಲ್ನಲ್ಲಿ ಮಗುವಿನ ಶವವನ್ನು ದಫನ ಮಾಡಲು ದಂಪತಿ ಬಯಸಿದ್ದು,ಇದಕ್ಕಾಗಿ ಕಥುವಾ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆದುಕೊಂಡಿದ್ದರು.
ಆದರೆ ಪೊಲೀಸರು ದಂಪತಿ ಮತ್ತು ಹದಿಹರೆಯದ ಪುತ್ರನನ್ನು ಕೈಕೋಳ ತೊಡಿಸಿ ನರ್ವಾಲ್ಗೆ ಕರೆದೊಯ್ದಿದ್ದರು ವರದಿಯು ಹೇಳಿದೆ.
ದಿಗ್ಬಂಧನ ಕೇಂದ್ರದಲ್ಲಿರುವವರು ಆಗಾಗ್ಗೆ ಪ್ರತಿಭಟನೆಗಳು ಮತ್ತು ಉಪವಾಸ ಮುಷ್ಕರಗಳನ್ನು ನಡೆಸುತ್ತಿದ್ದು,ಕಳೆದ ಮೇ ತಿಂಗಳಿನಿಂದಲೂ ಅಲ್ಲಿ ಉದ್ವಿಗ್ನ ಸ್ಥಿತಿಯಿದೆ. ಕೇಂದ್ರದ ಹೊರಗಿನ ರೋಹಿಂಗ್ಯಾ ಬಡಾವಣೆಗಳಲ್ಲಿ ವಾಸವಿರುವ ತಮ್ಮ ಬಂಧುಗಳನ್ನು ಸೇರಿಕೊಳ್ಳಲು ತಮ್ಮ ಬಿಡುಗಡೆಗಾಗಿ ಅವರು ಆಗ್ರಹಿಸುತ್ತಿದ್ದಾರೆ.