ಪ್ರಧಾನಿ ಮೋದಿ ರೋಡ್ ಶೋನಲ್ಲಿ ಕೇರಳದ ಏಕೈಕ ಮುಸ್ಲಿಂ ಅಭ್ಯರ್ಥಿಯ ಕಡೆಗಣನೆ; ಆರೋಪ

Update: 2024-03-20 06:59 GMT

ನರೇಂದ್ರ ಮೋದಿ |Photo; PTI

ತಿರುವನಂತಪುರಂ: ಕೇರಳದಲ್ಲಿ ಮಂಗಳವಾರ ನಡೆದ ಪ್ರಧಾನಿ ನರೇಂದ್ರ ಮೋದಿಯವರ ರೋಡ್ ಶೋನಲ್ಲಿ ಮುಂಬರುವ ಲೋಕಸಭಾ ಚುನಾವಣೆಯ ಬಿಜೆಪಿಯ ಏಕೈಕ ಮುಸ್ಲಿಂ ಅಭ್ಯರ್ಥಿಯನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಲಾಗಿದೆ.

ಮಂಗಳವಾರ ಪಾಲಕ್ಕಾಡ್ ನಲ್ಲಿ ನಡೆದ ರೋಡ್ ಶೋನಲ್ಲಿ ಪಾಲಕ್ಕಾಡ್ ಜಿಲ್ಲೆಯ ಅಭ್ಯರ್ಥಿ ಹಾಗೂ ಅದಕ್ಕೆ ಹೊಂದಿಕೊಂಡಿರುವ ಪೊನ್ನಾನಿ ಲೋಕಸಭಾ ಕ್ಷೇತ್ರ(ಮಲಪ್ಪುರಂ)ದ ಅಭ್ಯರ್ಥಿಗಳು ಮೋದಿಯೊಂದಿಗೆ ತೆರೆದ ವಾಹನದಲ್ಲಿ ಕಾಣಿಸಿಕೊಂಡರು. ಆದರೆ, ಬಿಜೆಪಿಯ ಮಲಪ್ಪುರಂ ಅಭ್ಯರ್ಥಿ ಅಬ್ದುಲ್ ಸಲಾಮ್ ಅವರಿಗೆ ವಾಹನದಲ್ಲಿ ಜಾಗವಿರಲಿಲ್ಲ.

ಈ ಕುರಿತು ಪ್ರತಿಕ್ರಿಯಿಸಿದ ಸಿಪಿಎಂ ಹಿರಿಯ ನಾಯಕ ಎ.ಕೆ.ಬಾಲನ್, ಮೋದಿ ರೋಡ್ ಶೋನಲ್ಲಿ ಉದ್ದೇಶಪೂರ್ವಕವಾಗಿ ಅಬ್ದುಲ್ ಸಲಾಂ ಅವರನ್ನು ಕಡೆಗಣಿಸಲಾಗಿದ್ದು, ಇದು ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧದ ಬಿಜೆಪಿ ಧೋರಣೆಯನ್ನು ಪ್ರದರ್ಶಿಸುತ್ತದೆ ಎಂದು ಟೀಕಿಸಿದರು.

ಆದರೆ, ಈ ಆರೋಪವನ್ನು ತಳ್ಳಿ ಹಾಕಿರುವ ಸಲಾಂ, ನನ್ನ ಕ್ಷೇತ್ರಕ್ಕೂ ಪಾಲಕ್ಕಾಡ್ ಕ್ಷೇತ್ರಕ್ಕೂ ಯಾವುದೇ ಸಂಬಂಧವಿಲ್ಲದೆ ಇದ್ದುದರಿಂದ ನನಗೆ ವಾಹನದಲ್ಲಿ ಸ್ಥಳಾವಕಾಶ ಒದಗಿಸುವ ಯೋಜನೆ ಹೊಂದಿರಲಿಲ್ಲ ಎಂದು ಹೇಳಿದ್ದು, ಪೊನ್ನನಿ ಲೋಕಸಭಾ ಕ್ಷೇತ್ರವು ಪಾಲಕ್ಕಾಡ್ ಜಿಲ್ಲೆಯು ತ್ರಿತಲ ವಿಧಾನಸಭಾ ಕ್ಷೇತ್ರವನ್ನೂ ಒಳಗೊಂಡಿರುವುದರಿಂದ ಪೊನ್ನನಿ ಲೋಕಸಭಾ ಕ್ಷೇತ್ರದ ನಿವೇದಿತಾ ಸುಬ್ರಮಣಿಯನ್ ರೋಡ್ ಶೋನಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು ಎಂದು ಸ್ಪಷ್ಟೀಕರಣ ನೀಡಿದ್ದಾರೆ.

ನಾನು ಮೋದಿಯನ್ನು ಪಾಲಕ್ಕಾಡ್ ನಲ್ಲಿ ಭೇಟಿಯಾಗಿ, ಅವರನ್ನು ಮಲಪ್ಪುರಂಗೂ ಆಹ್ವಾನಿಸಿದೆ ಎಂದೂ ಸಲಾಂ ಹೇಳಿದ್ದಾರೆ.

ಕ್ಯಾಲಿಕಟ್ ವಿಶ್ವವಿದ್ಯಾಲಯದ ಮಾಜಿ ಕುಲಪತಿಯಾಗಿರುವ ಸಲಾಂ 2021ರಲ್ಲಿ ಮಲಪ್ಪುರಂನ ತಿರೂರ್ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ, ಆ ಕ್ಷೇತ್ರದಲ್ಲಿ ಅವರು ಕೇವಲ ಶೇ. 5ರಷ್ಟು ಮತ ಗಳಿಸಲಷ್ಟೆ ಶಕ್ತರಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News