ರಶ್ಯ ಪ್ರಜೆ ಮಾಲಕತ್ವದ ಸಂಸ್ಥೆಯಿಂದ ಭಾರತೀಯ ಹೂಡಿಕೆದಾರರಿಗೆ 800 ಕೋಟಿ ರೂ. ವಂಚನೆ: ವರದಿ
ಹೊಸದಿಲ್ಲಿ: ಪಾವೆಲ್ ಪ್ರೊಝೊರೋವ್ ಎಂಬ ರಶ್ಯ ಪ್ರಜೆ ಮಾಲಕತ್ವದ ಸಂಸ್ಥೆಯು ಹುಟ್ಟು ಹಾಕಿದ್ದ 800 ಕೋಟಿ ರೂ. ಮೊತ್ತದ ವಂಚಕ ಯೋಜನೆ ಹಗರಣದ ಸಂಬಂಧ ಜಾರಿ ನಿರ್ದೇಶನಾಲಯವು ದೋಷಾರೋಪ ಪಟ್ಟಿ ಸಲ್ಲಿಸಿದೆ ಎಂದು ವರದಿಯಾಗಿದೆ.
ಕಳೆದ ನಾಲ್ಕೈದು ವರ್ಷಗಳಿಂದ ತನ್ನ ಜಾಹೀರಾತುಗಳು ಹಾಗೂ ಐಪಿಎಲ್ ತಂಡಗಳ ಪ್ರಾಯೋಜಕತ್ವದಿಂದ ಆಕ್ಟಾ ಎಫ್ಎಕ್ಸ್ ಎಂಬ ವಿದೇಶಿ ವಿನಿಮಯ ಸಂಸ್ಥೆಯು ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಯಲ್ಲಿತ್ತು. ಆದರೆ, ಇದೆಲ್ಲ ವಿಸ್ತೃತ ವಂಚಕ ಯೋಜನೆಯ ಭಾಗವಾಗಿತ್ತು ಎಂಬ ಸಂಗತಿ ಯಾರಿಗೂ ತಿಳಿದಿರಲಿಲ್ಲ ಎಂದು India Today ಸುದ್ದಿ ಸಂಸ್ಥೆ ವರದಿ ಮಾಡಿದೆ.
ಅಧಿಕ ಮೊತ್ತವನ್ನು ಹಿಂಪಾವತಿಸಲಾಗುವುದು ಎಂಬ ಆಮಿಷವೊಡ್ಡಿ ಅಸಂಖ್ಯಾತ ಹೂಡಿಕೆದಾರರನ್ನು ಈ ಆ್ಯಪ್ ನ ಪ್ರವರ್ತಕರು ವಂಚಿಸಿದ್ದಾರೆ ಎಂಬ ಆರೋಪ ಆಧರಿಸಿ ಪುಣೆಯ ಶಿವಾಜಿನಗರ ಠಾಣೆಯ ಪೊಲೀಸರು ದಾಖಲಿಸಿಕೊಂಡಿದ್ದ ಪ್ರಾಥಮಿಕ ಮಾಹಿತಿ ವರದಿಯ ಆಧಾರದಲ್ಲಿ ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿಕೊಂಡಿದೆ.
ಸಾಮಾಜಿಕ ಮಾಧ್ಯಮಗಳ ಇನ್ ಫ್ಲುಯೆನ್ಸರ್ ಗಳು, ಕಿರುತೆರೆ ನಟರು ಹಾಗೂ ಬಾಲಿವುಡ್ ನಟರ ಮಾರುಕಟ್ಟೆ ನೆರವಿನೊಂದಿಗೆ ಯಾವುದೇ ಸಂಶಯ ಬಾರದಂತೆ ಆಕ್ಟಾಎಫ್ಎಕ್ಸ್ ಸಂಸ್ಥೆ ಹೂಡಿಕೆದಾರರಿಗೆ ಆಮಿಷವೊಡ್ಡಿತ್ತು ಎಂದು ಆರೋಪಿಸಲಾಗಿದೆ.
ಈ ಕಂಪನಿಯಿಂದ ಉತ್ತಮ ಪಾವತಿ ಪಡೆಯುತ್ತಿದ್ದ ಮಧ್ಯವರ್ತಿಗಳು ಹೂಡಿಕೆದಾರರಿಗೆ ನೆರವು ನೀಡುತ್ತಿದ್ದರು ಎನ್ನಲಾಗಿದೆ. ಆದರೆ, ದೋಷಾರೋಪ ಪಟ್ಟಿ ಸಲ್ಲಿಕೆಯ ಹೊರತಾಗಿಯೂ, ಯಾವುದೇ ಹಗರಣ ನಡೆದಿಲ್ಲ ಎಂದು ಈ ವಿದೇಶಿ ವಿನಿಮಯ ಸಂಸ್ಥೆ ತಳ್ಳಿ ಹಾಕಿದೆ.
“2011ರಿಂದ ಹಣಕಾಸು ಉದ್ಯಮದಲ್ಲಿ ಸುಭದ್ರ ವಿಶ್ವಾಸಾರ್ಹತೆಯನ್ನು ಗಳಿಸಿರುವ ಆಕ್ಟಾಎಫ್ಎಕ್ಸ್, ವಿಶ್ವಾದ್ಯಂತ ಲಕ್ಷಾಂತರ ಸಂತೃಪ್ತ ಗ್ರಾಹಕರನ್ನು ಹೊಂದಿದ್ದು, ನಮ್ಮ ಸೇವೆಗಳ ಗುಣಮಟ್ಟ ಹಾಗೂ ವಿಶ್ವಾಸಾರ್ಹತೆಗೆ ಇದು ಸಾಕ್ಷಿಯಾಗಿದೆ. ನಾವು ಯಾವುದೇ ಅಕ್ರಮ ಹಣ ವರ್ಗಾವಣೆ, ಉತ್ಪ್ರೇಕ್ಷಿತ ಹಿಂಪಾವತಿ ಮಾಡುವ ಭರವಸೆ ಅಥವಾ ವ್ಯಾಪಾರಿಗಳಿಗೆ ಅನನುಕೂಲವಾಗುವಂಥ ಅಭ್ಯಾಸಗಳಲ್ಲಿ ತೊಡಗಿಕೊಂಡಿರುವ ಆರೋಪಗಳನ್ನು ಬಲವಾಗಿ ನಿರಾಕರಿಸುತ್ತೇವೆ” ಎಂದು ಆಕ್ಟಾಎಫ್ಎಕ್ಸ್ ಸಂಸ್ಥೆಯ ವಕ್ತಾರರೊಬ್ಬರು India Today ಸುದ್ದಿ ಸಂಸ್ಥೆಗೆ ಪ್ರತಿಕ್ರಿಯೆ ನೀಡಿದ್ದಾರೆ.
ನಾವು ತ್ವರಿತ ಗಳಿಕೆ ಅಥವಾ ಖಾತ್ರಿಪಡಿಸಿದ ಲಾಭಗಳ ಭರವಸೆಗಳನ್ನು ಎಂದೂ ನೀಡಿಲ್ಲ ಎಂದು ತನ್ನ ವಿರುದ್ಧ ಕೇಳಿ ಬಂದಿರುವ ಆರೋಪಗಳಿಗೆ ವ್ಯತಿರಿಕ್ತವಾಗಿ ಸಂಸ್ಥೆಯು ಸ್ಪಷ್ಟನೆ ನೀಡಿದೆ.
ಈ ನಡುವೆ, ಅಪರಾಧ ಪ್ರಗತಿಯಲ್ಲಿ ಆಕ್ಟಾಎಫ್ಎಕ್ಸ್ ಸಂಸ್ಥೆಯು ಕೇವಲ ಎಂಟು ತಿಂಗಳ ಕಾರ್ಯಾಚರಣೆಯಲ್ಲಿ 800 ಕೋಟಿ ರೂ. ಗಳಿಸಿದೆ ಎಂಬ ಸಂಗತಿ ಜಾರಿ ನಿರ್ದೇಶನಾಲಯದ ತನಿಖೆಯಲ್ಲಿ ಬೆಳಕಿಗೆ ಬಂದಿದೆ.