ಲೋಕಸಭಾ ಚುನಾವಣೆಯು ಅತಿಯಾದ ಆತ್ಮವಿಶ್ವಾಸ ಹೊಂದಿದ ಬಿಜೆಪಿ ನಾಯಕರಿಗೆ ವಾಸ್ತವವನ್ನು ಅರಿಯುವಂತೆ ಮಾಡಿದೆ: ಆರೆಸ್ಸೆಸ್‌

Update: 2024-06-11 07:43 GMT

ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ (PTI)

ಹೊಸದಿಲ್ಲಿ: ಈ ವರ್ಷ ನಡೆದ ಲೋಕಸಭಾ ಚುನಾವಣೆಗಳು ಅತಿಯಾದ ಆತ್ಮವಿಶ್ವಾಸ ಹೊಂದಿದ ಹಲವಾರು ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರಿಗೆ ವಾಸ್ತವವನ್ನು ಅರಿಯುವಂತೆ ಮಾಡಿದೆ ಎಂದು ಆರೆಸ್ಸೆಸ್‌ ಸದಸ್ಯ ರತನ್‌ ಶಾರ್ದಾ ಅವರು ಸಂಘದ ಮುಖವಾಣಿ ಆರ್ಗನೈಝರ್‌ನಲ್ಲಿ ಬರೆದ ಲೇಖನದಲ್ಲಿ ಹೇಳಿಕೊಂಡಿದ್ದಾರೆ.

“ಪ್ರಧಾನಿ ನರೇಂದ್ರ ಮೋದಿ ಅವರ 400+ ಕರೆಯು ಅವರಿಗೊಂದು ಲಕ್ಷ್ಯ ಆಗಿತ್ತು ಮತ್ತು [ವಿಪಕ್ಷಗಳಿಗೆ] ಸವಾಲಾಗಿತ್ತು ಎಂದು ಅವರು ಅರಿಯಲಿಲ್ಲ. ಇಂತಹ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ತಮ್ಮ “ಗುಳ್ಳೆಯಲ್ಲಿ ಖುಷಿಯಲ್ಲಿರುತ್ತಾರೆ” ಮತ್ತು “ಜನರ ಧ್ವನಿಗಳನ್ನು ಆಲಿಸುತ್ತಿಲ್ಲ,” ಎಂದು ಅವರು ಬರೆದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಿದ ಮರುದಿನ ಈ ಲೇಖನ ಪ್ರಕಟಗೊಂಡಿದೆ.

ಈ ಚುನಾವಣೆಯಲ್ಲಿ ಬಿಜೆಪಿಗಾಗಿ ಆರೆಸ್ಸೆಸ್‌ ಕೆಲಸ ಮಾಡಿಲ್ಲ ಎಂಬ ಕೆಲವರ ಅಭಿಪ್ರಾಯವನ್ನು ಅಲ್ಲಗಳೆಯುವ ಯತ್ನವನ್ನು ಈ ಲೇಖನದಲ್ಲಿ ಲೇಖಕರು ಮಾಡಿದ್ದಾರೆ. ಆರೆಸ್ಸೆಸ್‌ ಬಿಜೆಪಿಗೆ ಕಾರ್ಯಪಡೆಯಲ್ಲ ಮತ್ತು ಬಿಜೆಪಿಗೆ ತಮ್ಮದೇ ಆದ ಕಾರ್ಯಕರ್ತರಿದ್ದಾರೆ ಎಂದು ಅವರು ಬರೆದಿದ್ದಾರೆ. “ಆರೆಸ್ಸೆಸ್‌ ಕಾರ್ಯಕರ್ತರ ಸಹಕಾರ ಬೇಕಿದ್ದಲ್ಲಿ ಬಿಜೆಪಿಯ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರು ತಮ್ಮ ಸೈದ್ಧಾಂತಿಕ ಮಿತ್ರ ಸಂಘಟನೆಯ ಕಾರ್ಯಕರ್ತರೊಂದಿಗೆ ಸಂಹವನ ನಡೆಸಬೇಕು ಅದರೆ ಅವರು ಹಾಗೆ ಮಾಡಿಲ್ಲ ಎಂದು ನನ್ನ ಅನುಭವ ಮತ್ತು ಸಂವಹನಗಳು ತಿಳಿಸುತ್ತವೆ,” ಎಂದು ಅವರು ಹೇಳಿದರು.

“ಪ್ರಚಾರದ ವೇಳೆ ಸಭ್ಯತೆ ಕಾಪಾಡಿಲ್ಲ”: ಮೋಹನ್‌ ಭಾಗವತ್‌ ಅಸಮಾಧಾನ

ಇನ್ನೊಂದೆಡೆ ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗ್ವತ್‌ ಪ್ರತಿಕ್ರಿಯಿಸಿ ಆಡಳಿತ ಮೈತ್ರಿಕೂಟ ಮತ್ತು ವಿಪಕ್ಷಗಳು ಪ್ರಚಾರದ ವೇಳೆ ಸಭ್ಯತೆಯನ್ನು ಕಾಪಾಡಿಲ್ಲ ಮತ್ತು ಸಾಮಾಜಿಕ ಕಂದಕಗಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಪ್ರಚಾರದ ವೇಳೆ ಹೇಳಲಾದ ಸಂಗತಿಗಳು ಮತ್ತು ಎರಡೂ ಕಡೆಗಳು ಮಾಡಿರುವ ಆರೋಪ ಪ್ರತ್ಯಾರೋಪಗಳಿಂದ ಉದ್ಭವವಾದ ಸಾಮಾಜಿಕ ಕಂದಕಗಳ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಲಿಲ್ಲ, ಸಕಾರಣವಿಲ್ಲದೆ ಸಂಘವನ್ನು ಇದರಲ್ಲಿ ಎಳೆದು ತರಲಾಯಿತು. ದೇಶ ಈ ರೀತಿ ಹೇಗೆ ನಡೆಯಬಹುದು?” ಎಂದು ನಾಗ್ಪುರದಲ್ಲಿ ಆರೆಸ್ಸೆಸ್‌ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಅವರು ಹೇಳಿದರು.

“ಜನರ ನಿಜವಾದ ಸೇವಕನಿಗೆ ಅಹಂಕಾರವಿರುವುದಿಲ್ಲ ಮತ್ತು ಅವನು ಇತರರಿಗೆ ನೋವುಂಟು ಮಾಡುವುದಿಲ್ಲ,” ಎಂದು ಭಾಗವತ್‌ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News