ಚೀತಾಗಳ ನಿರ್ವಹಣೆ ಕುರಿತ ಆರ್ ಟಿ ಐ ಅರ್ಜಿ | ರಾಷ್ಟ್ರೀಯ ಭದ್ರತೆಯನ್ನು ಉಲ್ಲೇಖಿಸಿ ಮಾಹಿತಿ ನಿರಾಕರಿಸಿದ ಮಧ್ಯ ಪ್ರದೇಶ ಅರಣ್ಯ ಇಲಾಖೆ

Update: 2024-07-27 16:36 GMT

PC : PTI 

ಭೋಪಾಲ್ : ಆಫ್ರಿಕಾದಿಂದ ತರಲಾಗಿದ್ದ ಚೀತಾಗಳು ಮತ್ತು ಭಾರತದಲ್ಲಿ ಜನಿಸಿದ ಅವುಗಳ ಮರಿಗಳ ನಿರ್ವಹಣೆ ಕುರಿತು ವಿವರಗಳನ್ನು ಕೋರಿದ್ದ ಆರ್‌ಟಿಐ ಅರ್ಜಿಯನ್ನು ಮಧ್ಯಪ್ರದೇಶ ಅರಣ್ಯ ಇಲಾಖೆಯು ರಾಷ್ಟ್ರೀಯ ಭದ್ರತೆ ಮತ್ತು ವಿದೇಶ ಸಂಬಂಧಗಳ ಕಳವಳಗಳನ್ನು ಉಲ್ಲೇಖಿಸಿ ನಿರಾಕರಿಸಿದೆ.

2023ರಿಂದ ಮಧ್ಯಪ್ರದೇಶದ ಕುನೊ ನ್ಯಾಷನಲ್ ಪಾರ್ಕ್‌ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾದಿಂದ ತರಲಾಗಿದ್ದ 20 ಚೀತಾಗಳ ಪೈಕಿ ಏಳು ಮತ್ತು ಭಾರತದಲ್ಲಿ ಜನಿಸಿದ್ದ ಮೂರು ಮರಿಗಳು ಸಾವನ್ನಪ್ಪಿವೆ.

ವನ್ಯಜೀವಿ ಕಾರ್ಯಕರ್ತ ಅಜಯ್ ದುಬೆ ಅವರು ಕುನೊ ಮತ್ತು ಮಂದಸೌರ್‌ಗಳಲ್ಲಿ ಪ್ರಾಜೆಕ್ಟ್ ಚೀತಾ ಕುರಿತು ಪತ್ರವ್ಯವಹಾರಗಳ ದಾಖಲೆಗಳನ್ನು ಕೋರಿ ಆರ್‌ಟಿಐ ಅರ್ಜಿಯನ್ನು ಸಲ್ಲಿಸಿದ್ದರು.

‘ನಾನು 2013ರಿಂದಲೂ ಹುಲಿಗಳ ಸಂರಕ್ಷಣೆಯಲ್ಲಿ ಅಕ್ರಮಗಳನ್ನು ಬಹಿರಂಗಗೊಳಿಸುತ್ತಿದ್ದೇನೆ. ಆದರೆ ಚೀತಾಗಳ ಕುರಿತು ಮಾಹಿತಿಗಳನ್ನು ಬಹಿರಂಗಗೊಳಿಸುವುದು ರಾಷ್ಟ್ರೀಯ ಭದ್ರತೆ ಅಥವಾ ವಿದೇಶಗಳೊಡನೆ ಸಂಬಂಧಗಳ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ ಎಂಬ ಉತ್ತರವನ್ನು ಇದೇ ಮೊದಲ ಬಾರಿಗೆ ಸ್ವೀಕರಿಸಿದ್ದೇನೆ ’ ಎಂದು ದುಬೆ ಸುದ್ದಿಸಂಸ್ಥೆಗೆ ತಿಳಿಸಿದರು.

ತನ್ನ ಹಿಂದಿನ ವಿಚಾರಣೆಯಲ್ಲಿ ದುಬೆ ಭಾರತದಲ್ಲಿ ಜನಿಸಿದ್ದ ಮೊದಲ ಚೀತಾ ಮರಿಯ ಆರೋಗ್ಯದ ಕುರಿತು ಮಾಹಿತಿಯನ್ನು ಸ್ವೀಕರಿಸಿದ್ದರು. ಒಂದು ಕಾಲಿಗೆ ಬ್ಯಾಂಡೇಜ್ ಸುತ್ತಿದ್ದ ಚೀತಾ ಮರಿಯ ಚಿತ್ರವೂ ಅವರಿಗೆ ಲಭ್ಯವಾಗಿತ್ತು. ಆಗ ದುಬೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ ದೂರು ಸಲ್ಲಿಸಿ, ಮಧ್ಯಪ್ರದೇಶದ ಅರಣ್ಯ ಅಧಿಕಾರಿಗಳು ಚೀತಾ ಗಾಯಗೊಂಡಿರುವ ಬಗ್ಗೆ ಮಾಹಿತಿ ನೀಡಿರಲಿಲ್ಲ ಎಂದು ಆರೋಪಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News