ಕಮಲ್ ನಾಥ್ ಬಿಜೆಪಿ ಸೇರುವ ಸಾಧ್ಯತೆ ವದಂತಿ; ಸಂಧಾನಕ್ಕಿಳಿದ ಕಾಂಗ್ರೆಸ್

Update: 2024-02-11 09:08 GMT

ಭೋಪಾಲ್: ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರು ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರುವ ಸಾಧ್ಯತೆಯಿದೆ ಎಂಬ ವದಂತಿಗಳು ದಟ್ಟವಾಗಿವೆ. ಈ ಬೆಳವಣಿಗೆಗಳ ನಡುವೆ ಕಾಂಗ್ರೆಸ್ ನಾಥ್ ಅವರೊಂದಿಗೆ ಸಂಧಾನ ಮಾತುಕತೆ ಆರಂಭಿಸಿದೆ ಎಂದು ಮಲಯಾಳಂ ಮನೋರಮದ ವೆಬ್ ಸೈಟ್ onmanorama ವರದಿ ಮಾಡಿದೆ.

ಏಪ್ರಿಲ್ 2 ರಂದು ರಾಜ್ಯದಿಂದ ಐದು ರಾಜ್ಯಸಭೆ ಸ್ಥಾನಗಳು ತೆರವುಗೊಳ್ಳುತ್ತಿರುವ ಕಾರಣ ಈ ಬೆಳವಣಿಗೆ ವೇಗ ಪಡೆದಿದೆ ಎನ್ನಲಾಗಿದೆ. ಮೇಲ್ಮನೆ ಸ್ಥಾನಗಳಲ್ಲಿ ನಾಲ್ಕು ಬಿಜೆಪಿ ಮತ್ತು ಒಂದು ಕಾಂಗ್ರೆಸ್‌ನೊಂದಿಗೆ ಇವೆ. ವರದಿಗಳ ಪ್ರಕಾರ ಕಮಲ್ ನಾಥ್ ಅವರಿಗೆ ರಾಜ್ಯಸಭಾ ಸ್ಥಾನವನ್ನು ನೀಡುವ ಸಾಧ್ಯತೆಯಿದೆ ಮತ್ತು ಅವರ ಮಗ ಮತ್ತು ಮಧ್ಯಪ್ರದೇಶದ ಏಕೈಕ ಕಾಂಗ್ರೆಸ್ ಸಂಸದ ನಕುಲ್ ನಾಥ್ ಅವರಿಗೆ ಚಿಂದ್ವಾರದಿಂದ ಲೋಕಸಭೆ ಸ್ಥಾನ ಮತ್ತು ಸಚಿವ ಸ್ಥಾನವೂ ಸಿಗಲಿದೆ ಎಂದು ತಿಳಿದು ಬಂದಿದೆ.

ಮುಖ್ಯಮಂತ್ರಿ ಮೋಹನ್ ಯಾದವ್ ಅವರ ಇತ್ತೀಚಿನ ನವದೆಹಲಿ ಭೇಟಿ ಮತ್ತು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಬಿಜೆಪಿ ಸೇರುವ ವಿಷಯದ ಬಗ್ಗೆಯೂ ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿದೆ.

ಕಮಲ್ ನಾಥ್ ಅವರು 1980 ರಿಂದ 2019 ರವರೆಗೆ ಒಂಭತ್ತು ಅವಧಿಗಳಲ್ಲಿ ಛಿಂದ್ವಾರಾ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಈ ಮಧ್ಯೆ ಕಮಲ್ನಾಥ್ ಅವರು ಫೆಬ್ರವರಿ 13 ರಂದು ತಮ್ಮ ನಿವಾಸದಲ್ಲಿ ಎಲ್ಲಾ ಕಾಂಗ್ರೆಸ್ ಶಾಸಕರನ್ನು ಔತಣಕೂಟಕ್ಕೆ ಆಹ್ವಾನಿಸಿರುವುದು ಕುತೂಹಲಕ್ಕೆ ಎಡೆಮಾಡಿದೆ.

ಕಾಂಗ್ರೆಸ್ ರಾಜ್ಯಸಭಾ ಸಂಸದ ಮತ್ತು ಹಿರಿಯ ವಕೀಲ ವಿವೇಕ್ ತನ್ಖಾ ಅವರೂ ಬಿಜೆಪಿಗೆ ಸೇರುವ ಸಾಧ್ಯತೆಯಿದೆ ಎಂಬ ಊಹಾಪೋಹಗಳು ಹರಡಿವೆ. ತಂಖಾ ಅವರು ಕಮಲ್ ನಾಥ್ ರ ಆಪ್ತರಾಗಿದ್ದಾರೆ.

ಇಬ್ಬರು ಕಾಂಗ್ರೆಸ್ ನಾಯಕರಾದ ಜಬಲ್‌ಪುರ ಮೇಯರ್ ಜಗತ್ ಬಹದ್ದೂರ್ ಸಿಂಗ್ ಮತ್ತು ಸಂಸದ, ಕಾಂಗ್ರೆಸ್ ಕಾನೂನು ಘಟಕದ ಮಾಜಿ ಮುಖ್ಯಸ್ಥ ಶಶಾಂಕ್ ಶೇಖರ್ ಈಗಾಗಲೇ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಜಗತ್ ಬಹದ್ದೂರ್ ಮತ್ತು ಶಶಾಂಕ್ ಶೇಖರ್ ಇಬ್ಬರೂ ವಿವೇಕ್ ತನ್ಖಾಗೆ ಆಪ್ತರು ಎಂದು ಹೇಳಲಾಗುತ್ತಿದೆ. ತನ್ಖಾ ಅವರು ಜೂನ್ 2022 ರಲ್ಲಿ ರಾಜ್ಯಸಭಾ ಸಂಸದರಾಗಿ ಎರಡನೇ ಅವಧಿಗೆ ಆಯ್ಕೆಯಾಗಿದ್ದಾರೆ. ಅವರ ಅಧಿಕಾರಾವಧಿಯು ಜೂನ್ 2028 ರಲ್ಲಿ ಮುಕ್ತಾಯಗೊಳ್ಳಲಿದೆ.

ಒಂದು ವೇಳೆ ಕಮಲ್ ನಾಥ್ ಬಿಜೆಪಿಗೆ ಸೇರ್ಪಡೆಗೊಂಡರೆ, ಕಾಂಗ್ರೆಸ್ ಜೊತೆಗಿನ ಒಡನಾಟವನ್ನು ತನ್ಖಾ ಕೂಡ ಕೊನೆಗೊಳಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News