ರಶ್ಯ ಸೇನೆಯಲ್ಲಿನ ಭಾರಿ ಮೊತ್ತದ ವೇತನದ ಆಸೆಗೆ ಭಾರತೀಯ ಪಾಸ್ ಪೋರ್ಟ್ ತೊರೆದರು!

Update: 2024-09-11 14:45 GMT

PC : indianexpress.com

ಹೊಸದಿಲ್ಲಿ: ಉಕ್ರೇನ್ ಮತ್ತು ರಶ್ಯ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ರಶ್ಯ ಸೇನೆಯ ಪರವಾಗಿ ನೆರವು ಸಿಬ್ಬಂದಿಗಳಾಗಿ ತೆರಳಿದ್ದ ಹಲವಾರು ಕೇರಳಿಗರು, ಭಾರಿ ಮೊತ್ತದ ವೇತನದ ಆಮಿಷಕ್ಕಾಗಿ ತಮ್ಮ ಭಾರತೀಯ ಪಾಸ್ ಪೋರ್ಟ್ ಅನ್ನು ಶರಣಾಗಿಸಿ, ರಶ್ಯದ ಖಾಯಂ ನಿವಾಸಿಗಳಾಗಿರುವ ವಿಷಯ ಬೆಳಕಿಗೆ ಬಂದಿದೆ ಎಂದು ರಾಜ್ಯ ಸರಕಾರದ ಅನಿವಾಸಿ ಕೇರಳಿಗರ ವ್ಯವಹಾರಗಳ ಇಲಾಖೆ ತಿಳಿಸಿದೆ.

ತಾವು ತವರಿನಲ್ಲಿ ಗಳಿಸುತ್ತಿದ್ದಕ್ಕಿಂತ ಭಾರಿ ಪ್ರಮಾಣದ ವೇತನವಾದ ಸುಮಾರು ರೂ. 2.5 ಲಕ್ಷ ಮಾಸಿಕ ವೇತನದ ಆಹ್ವಾನ ದೊರೆತಿದ್ದರಿಂದ ರಶ್ಯ ಸೇನೆಯ ನೆರವು ಸಿಬ್ಬಂದಿಗಳಾಗಿ ತೆರಳಿದ್ದ ಈ ಕೇರಳಿಗರು ತಮ್ಮ ಭಾರತೀಯ ಪಾಸ್ ಪೋರ್ಟ್ ಅನ್ನು ಶರಣಾಗಿಸಿದ್ದಾರೆ ಎಂದು ಅನಿವಾಸಿ ಕೇರಳಿಗರ ವ್ಯವಹಾರಗಳ ಇಲಾಖೆ (NORKA)ದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಜಿತ್ ಕೊಲಸ್ಸೆರಿ ಹೇಳಿದ್ದಾರೆ.

“ತಾವು ರಶ್ಯದ ಖಾಯಂ ನಿವಾಸತ್ವವನ್ನು ಪಡೆದುಕೊಂಡ ನಂತರ ರಶ್ಯ ಸೇನೆಯನ್ನು ಸೇರ್ಪಡೆಯಾಗಲು ಇವರೆಲ್ಲ ಲಿಖಿತ ಸಮ್ಮತಿ ನೀಡಿದ್ದಾರೆ ಎಂದು ಮಾಸ್ಕೊದಲ್ಲಿನ ಭಾರತೀಯ ರಾಯಭಾರಿ ಕಚೇರಿಯಿಂದ ತಿಳಿದು ಬಂದಿದೆ” ಎಂದು ಅವರು ಹೇಳಿದ್ದಾರೆ.

ಆದರೆ, ಆಗಸ್ಟ್ ತಿಂಗಳ ಎರಡನೆ ವಾರದಲ್ಲಿ ನಡೆದ ಡ್ರೋನ್ ದಾಳಿಯಲ್ಲಿ ಕೇರಳದ ತ್ರಿಶೂರ್ ಜಿಲ್ಲೆಯ 36 ವರ್ಷದ ಸಂದೀಪ್ ಮೃತಪಟ್ಟ ನಂತರ, ಈ ಪೈಕಿ ಕೆಲವರು ತವರಿಗೆ ಮರಳಲು ಬಯಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಇದರ ಬೆನ್ನಿಗೇ ಕೆಲವು ವ್ಯಕ್ತಿಗಳ ಕುಟುಂಬಗಳು ರಾಜ್ಯ ಸರಕಾರದ ಮೊರೆ ಹೋಗಿದ್ದು, ಕಳೆದ ವಾರ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡಾ ಅವರನ್ನು ರಶ್ಯದ ಸೇನಾ ಶಿಬಿರಗಳಿಂದ ತವರಿಗೆ ಮರಳಿ ಕರೆ ತರಬೇಕು ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರಿಗೆ ಪತ್ರ ಬರೆದಿದ್ದರು.

“ರಶ್ಯದಲ್ಲಿ ಇನ್ನೂ ಎಷ್ಟು ಮಂದಿ ಕೇರಳಿಗರು ಇದ್ದಾರೆ ಎಂಬುದು ನಮಗೆ ತಿಳಿದಿಲ್ಲ. ಈ ಪೈಕಿ ನಾಲ್ವರು ತವರಿಗೆ ಮರಳುವ ಬಯಕೆ ವ್ಯಕ್ತಪಡಿಸಿದ್ದಾರೆ. ಆದರೆ, ರೂ. 2.5 ಲಕ್ಷ ಮಾಸಿಕ ವೇತನದ ಭರವಸೆಯ ಕಾರಣಕ್ಕೆ ಇನ್ನೂ ಕೆಲವರು ಕೇರಳಕ್ಕೆ ಮರಳಲು ಬಯಸುತ್ತಿಲ್ಲ. ತವರಿನಲ್ಲಿ ಅವರೆಲ್ಲ ಮುಖ್ಯವಾಗಿ ಎಲೆಕ್ಟ್ರಿಶಿಯನ್ ಗಳು, ಬಾಣಸಿಗರು ಹಾಗೂ ಪ್ಲಂಬರ್ ಗಳಾಗಿದ್ದರು. ಕೇರಳದ ಮಟ್ಟಿಗೆ ಇದು ತುಂಬಾ ಅಸಹಜ ವಲಸೆಯಾಗಿದೆ” ಎಂದು ಕೊಲಸ್ಸೆರಿ ಹೇಳಿದ್ದಾರೆ.

ಈ ವರ್ಷದ ಮಾರ್ಚ್ ತಿಂಗಳಲ್ಲಿ ಭಾರತೀಯರನ್ನು ಮಾನವ ಕಳ್ಳ ಸಾಗಣೆ ಮಾಡಿದ ಆರೋಪದಲ್ಲಿ ಹಲವಾರು ಪ್ರವಾಸಿ ಏಜೆಂಟರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿತ್ತು. ಈ ಪೈಕಿ ಕೇರಳಿಗರೂ ಸೇರಿದ್ದರು. ಅವರನ್ನೆಲ್ಲ ವಂಚನೆಯ ಮಾರ್ಗದಲ್ಲಿ ರಶ್ಯ ಸೇನೆಗೆ ಸೇರ್ಪಡೆ ಮಾಡಲಾಗಿತ್ತು ಎಂದು ತಿಳಿದು ಬಂದಿದೆ.

ರಶ್ಯ-ಉಕ್ರೇನ್ ನಡುವಿನ ಯುದ್ಧದಲ್ಲಿ ರಶ್ಯ್ ಸೇನೆಯಲ್ಲಿ ನೆರವು ಸಿಬ್ಬಂದಿಗಳಾಗಿ ದುಡಿಯುತ್ತಿದ್ದ ಇಬ್ಬರು ಭಾರತೀಯರು ಮೃತಪಟ್ಟ ನಂತರ ಈ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿತ್ತು.

ಆಘಾತಕಾರಿ ಸಂಗತಿಯೆಂದರೆ, ಮಾರ್ಚ್ ತಿಂಗಳಲ್ಲಿ ಈ ಉದ್ಯೋಗ ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದರೂ, ಎಪ್ರಿಲ್ ತಿಂಗಳಲ್ಲೂ ಕೇರಳಿಗರು ರಶ್ಯ ಸೇನೆಯಲ್ಲಿ ನೆರವು ಸಿಬ್ಬಂದಿಗಳಾಗಿ ದುಡಿಯಲು ಸ್ವಯಂಪ್ರೇರಿತವಾಗಿ ರಶ್ಯಗೆ ಖಾಸಗಿ ವೀಸಾ ಮೇಲೆ ತೆರಳಿದ್ದಾರೆ. ಈ ಪೈಕಿ ಕೆಲವರ ಪ್ರಕಾರ, ನಮಗೆ ಸೇನಾ ಶಿಬಿರದಲ್ಲಿ ನಿಯೋಜಿಸುವ ಮಾಹಿತಿ ನೀಡಲಾಗಿತ್ತಾದರೂ, ಯುದ್ಧಗ್ರಸ್ತ ಪ್ರದೇಶದಲ್ಲಿ ಮುಂಚೂಣಿ ಸೈನ್ಯದಲ್ಲಿ ನಿಯೋಜಿಸುವ ಕುರಿತು ಯಾವುದೇ ಮಾಹಿತಿ ನೀಡಲಾಗಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.

“ರಶ್ಯ ಸೇನೆಯ ಭಾಗವಾಗಬೇಕಿದ್ದರೆ, ಭಾರತೀಯ ಪಾಸ್ ಪೋರ್ಟ್ ಅನ್ನು ಶರಣಾಗಿಸಿ, ರಶ್ಯದ ಖಾಯಂ ನಿವಾಸತ್ವ ಪಡೆದುಕೊಳ್ಳಬೇಕಿರುವುದು ಅನಿವಾರ್ಯ. ಆದರೆ, ಭಾರಿ ಮೊತ್ತದ ಮಾಸಿಕ ವೇತನದ ಆಮಿಷದ ಕಾರಣಕ್ಕೆ ಹಲವಾರು ಕೇರಳಿಗರು ಸ್ವಯಂ ಇಚ್ಛೆಯಿಂದ ರಶ್ಯ ಸೇನೆಯಲ್ಲಿ ನೆರವು ಸಿಬ್ಬಂದಿಗಳಾಗಿ ಸೇರ್ಪಡೆಯಾಗಿದ್ದಾರೆ” ಎಂದು ಹೆಸರೇಳಲಿಚ್ಛಿಸದ ರಶ್ಯದಲ್ಲಿ ವಾಸಿಸುತ್ತಿರುವ ಕೇರಳಿಗರೊಬ್ಬರು ಬಹಿರಂಗಪಡಿಸಿದ್ದಾರೆ.

ಸೌಜನ್ಯ: indianexpress.com

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News