ಮಾ.2018 ಮತ್ತು ಅ.2023ರ ನಡುವೆ 14,940 ಕೋಟಿ ರೂ.ಗೂ ಅಧಿಕ ಮೌಲ್ಯದ ಚುನಾವಣಾ ಬಾಂಡ್‌ಗಳ ಮಾರಾಟ

Update: 2023-11-01 15:21 GMT

ಸಾಂದರ್ಭಿಕ ಚಿತ್ರ.| Photo: PTI

ಹೊಸದಿಲ್ಲಿ: ಆರ್‌ಟಿಐ ಕಾರ್ಯಕರ್ತ ಕಮೊಡೋರ್(ನಿವೃತ್ತ) ಲೋಕೇಶ್ ಬಾತ್ರಾ ಅವರು ಆರ್‌ಟಿಐ ಕಾಯ್ದೆಯಡಿ ಪಡೆದುಕೊಂಡಿರುವ ಮಾಹಿತಿಗಳಂತೆ ಮಾರ್ಚ್ 2018 ಮತ್ತು ಅಕ್ಟೋಬರ್ 2023ರ ನಡುವೆ 14,940 ಕೋಟಿ ರೂ.ಗಳ ಭಾರೀ ಮೊತ್ತದ ಚುನಾವಣಾ ಬಾಂಡ್‌ಗಳು ಮಾರಾಟಗೊಂಡಿವೆ.

ಮಾರ್ಚ್ 2018ರಲ್ಲಿ ಮೊದಲ ಕಂತಿನ ಚುನಾವಣಾ ಬಾಂಡ್‌ಗಳನ್ನು ಮಾರಾಟಕ್ಕೆ ಲಭ್ಯವಾಗಿಸಲಾಗಿತ್ತು. ಆಗಿನಿಂದ 28 ಕಂತುಗಳಲ್ಲಿ ಬಾಂಡ್‌ಗಳನ್ನು ಮಾರಾಟ ಮಾಡಲಾಗಿದ್ದು,ವಿಧಾನಸಭಾ ಚುನಾವಣೆಗಳಿಗೆ ಮುನ್ನ ಈ ವರ್ಷದ ಅಕ್ಟೋಬರ್‌ನಲ್ಲಿ ಕೊನೆಯ ಕಂತಿನ ಮಾರಾಟ ನಡೆದಿತ್ತು. ಎಸ್‌ಬಿಐ ಈ ಬಾಂಡ್‌ಗಳನ್ನು ಮಾರಾಟ ಮಾಡಲು ಅಧಿಕಾರ ಹೊಂದಿರುವ ಏಕೈಕ ಬ್ಯಾಂಕ್ ಆಗಿದೆ.

ಆರ್‌ಟಿಐ ಕಾಯ್ದೆಯಡಿ ಎಸ್‌ಬಿಐ ಮೂಲಕ ಬಾತ್ರಾ ಪಡೆದುಕೊಂಡಿರುವ ಮಾಹಿತಿಗಳಂತೆ ಈವರೆಗೆ 14940,27,86,000 ರೂ. ಮೌಲ್ಯದ ಚುನಾವಣಾ ಬಾಂಡ್‌ಗಳು ಮಾರಾಟವಾಗಿವೆ.

14,094 ಕೋ.ರೂ.ಮೌಲ್ಯದ ಅಥವಾ ಮಾರಾಟಗೊಂಡ ಶೇ.94.336 ಬಾಂಡ್‌ಗಳು ತಲಾ ಒಂದು ಕೋಟಿ ರೂ.ಮುಖಬೆಲೆಗಳಲ್ಲಿದ್ದವು ಎನ್ನುವುದು ಗಮನಾರ್ಹವಾಗಿದೆ. ಇದಕ್ಕೆ ಹೋಲಿಸಿದರೆ ತಲಾ 1,000 ರೂ.ಮುಖಬೆಲೆಯ ಕೇವಲ 1.56 ಲಕ್ಷ ಅಥವಾ ಒಟ್ಟು ಮಾರಾಟದ ಶೇ. 0.0001ರಷ್ಟು ಬಾಂಡ್‌ಗಳು ಮಾರಾಟಗೊಂಡಿವೆ. 812 ಕೋಟಿಗೂ ಅಧಿಕ ಬಾಂಡ್‌ಗಳು (ಶೇ.5.4356) ತಲಾ 10 ಲಕ್ಷ ರೂ.,33.9 ಕೋಟಿ ಬಾಂಡ್‌ಗಳು (ಶೇ.0.2269) ತಲಾ ಒಂದು ಲಕ್ಷ ರೂ. ಮತ್ತು 26.3 ಲಕ್ಷ ಬಾಂಡ್‌ಗಳು (ಶೇ.0.0018) ತಲಾ 10,000 ರೂ. ಮೌಲ್ಯದ್ದಾಗಿದ್ದವು.

ಪ್ರಸ್ತುತ ಸರ್ವೋಚ್ಚ ನ್ಯಾಯಾಲಯವು ಚುನಾವಣಾ ಬಾಂಡ್‌ಗಳ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿರುವ ಅರ್ಜಿಗಳ ವಿಚಾರಣೆಯನ್ನು ನಡೆಸುತ್ತಿದೆ.

ಮಾರಾಟಗೊಂಡ ಹೆಚ್ಚಿನ ಬಾಂಡ್‌ಗಳು ತಲಾ ಒಂದು ಕೋಟಿ ರೂ.ಗಳ ಮುಖಬೆಲೆ ಹೊಂದಿರುವುದು ಬಾಂಡ್‌ಗಳನ್ನು ಹೆಚ್ಚಾಗಿ ಉದ್ಯಮ ಸಂಸ್ಥೆಗಳೇ ಖರೀದಿಸಿವೆಯೇ ಹೊರತು ಸಾಮಾನ್ಯ ಜನರಲ್ಲ ಎನ್ನುವುದನ್ನು ತೋರಿಸುತ್ತಿದೆ ಮತ್ತು ಇದರಲ್ಲಿ ರಾಜಕೀಯ ಪಕ್ಷಗಳಿಗೆ ದೇಣಿಗೆಗಳನ್ನು ನೀಡಿ ಪ್ರತಿಫಲದ ನಿರೀಕ್ಷೆ ಅಡಗಿದೆ ಎಂದು ಅರ್ಜಿದಾರರು ಬೆಟ್ಟು ಮಾಡಿದ್ದಾರೆ.

ಪಂಚರಾಜ್ಯ ಚುನಾವಣೆಗಳಿಗೆ ಮುನ್ನ ಅ.4 ಮತ್ತು 13ರ ನಡುವಿನ ಇತ್ತೀಚಿನ ಸುತ್ತಿನಲ್ಲಿ 1,148 ಕೋಟಿ ರೂ.ಮೌಲ್ಯದ ಚುನಾವಣಾ ಬಾಂಡ್‌ಗಳು ಮಾರಾಟಗೊಂಡಿವೆ. ಈ ಪೈಕಿ ಶೇ.95.352ರಷ್ಟು ಬಾಂಡ್‌ಗಳು ತಲಾ ಒಂದು ಕೋ.ರೂ.ಮೌಲ್ಯದ್ದಾಗಿದ್ದು,ಗರಿಷ್ಠ ಬಾಂಡ್‌ಗಳು ಹೈದರಾಬಾದ್‌ನಲ್ಲಿ ಮಾರಾಟಗೊಂಡಿವೆ ಎನ್ನುವದನ್ನು ಬಾತ್ರಾ ಪಡೆದುಕೊಂಡಿರುವ ಮಾಹಿತಿಗಳು ತೋರಿಸಿವೆ.  

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News