‘ಸನಾತನ ಧರ್ಮ’ ಹೇಳಿಕೆ ವಿವಾದ: ಉದಯನಿಧಿ ಸ್ಟಾಲಿನ್ ಅವರನ್ನು ಹಿಟ್ಲರ್ ಗೆ ಹೋಲಿಕೆ ಮಾಡಿದ ಬಿಜೆಪಿ

Update: 2023-09-05 11:26 GMT

ಉದಯನಿಧಿ ಸ್ಟಾಲಿನ್ (PTI)

ಹೊಸದಿಲ್ಲಿ: ಸನಾತನ ಧರ್ಮದ ಕುರಿತು ಹೇಳಿಕೆ ನೀಡಿದ್ದ ಡಿಎಂಕೆ ಸಚಿವ ಉದಯನಿಧಿ ಸ್ಟಾಲಿನ್ ಅವರನ್ನು ಬಿಜೆಪಿಯು ನಾಝಿ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಗೆ ಹೋಲಿಕೆ ಮಾಡಿದೆ ಎಂದು newindianexpress.com ವರದಿ ಮಾಡಿದೆ.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ರ ಪುತ್ರ ಉದಯನಿಧಿ ಸ್ಟಾಲಿನ್ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿರುವ ಬಿಜೆಪಿಯು, ಅವರ ಹೇಳಿಕೆಯು ಅಕ್ಷರಶಃ ದ್ವೇಷ ಭಾಷಣ ಎಂದು ಆರೋಪಿಸಿದೆ. ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಯು ದೇಶದಲ್ಲಿ ಸನಾತನ ಧರ್ಮವನ್ನು ಅನುಸರಿಸುವ ಶೇ. 80ರಷ್ಟು ಜನರ ನರಮೇಧಕ್ಕೆ ನೀಡಿರುವ ಕರೆಯಾಗಿದೆ ಎಂದೂ ಅದು ಟೀಕಿಸಿದೆ.

ಈ ಕುರಿತು ತನ್ನ ಅಧಿಕೃತ ಎಕ್ಸ್ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, “ಹಿಟ್ಲರ್ ಹೇಗೆ ಯಹೂದಿಗಳನ್ನು ಆರೋಪಿಗಳನ್ನಾಗಿಸಿದರು ಹಾಗೂ ಉದಯನಿಧಿ ಸ್ಟಾಲಿನ್ ಹೇಗೆ ಸನಾತನ ಧರ್ಮವನ್ನು ವ್ಯಾಖ್ಯಾನಿಸಿದ್ದಾರೆ ಎಂಬುದರ ನಡುವೆ ಹತ್ತಿರದ ಹೋಲಿಕೆ ಇದೆ. ಹಿಟ್ಲರ್ ನಂತೆಯೆ, ಕಿರಿಯ ಸ್ಟಾಲಿನ್ ಕೂಡಾ ಸನಾತನ ಧರ್ಮದ ನಿರ್ಮೂಲಕ್ಕೆ ಕರೆ ನೀಡಿದ್ದಾರೆ. ನಾಝಿಗಳ ದ್ವೇಷವು ಹೇಗೆ ಸುಮಾರು 6 ದಶಲಕ್ಷ ಯೂರೋಪಿಯನ್ ಯಹೂದಿಗಳ ನರಮೇಧ ಹಾಗೂ ಇತರ 5 ದಶಲಕ್ಷ ಮಂದಿ, ಮತ್ತಿತರ ಸಂತ್ರಸ್ತರು ಸೋವಿಯತ್ ರಷ್ಯಾದಲ್ಲಿ ಯುದ್ಧ ಕೈದಿಗಳಾಗುವಲ್ಲಿ ಅಂತ್ಯವಾಯಿತು ಎಂಬ ಸಂಗತಿ ನಮಗೆ ತಿಳಿದಿದೆ” ಎಂದು ವಾಗ್ದಾಳಿ ನಡೆಸಿದೆ.

ಇದರೊಂದಿಗೆ, ನೂತನವಾಗಿ ರಚನೆಯಾಗಿರುವ ವಿರೋಧ ಪಕ್ಷಗಳ ಮೈತ್ರಿ ಕೂಟದ ವಿರುದ್ಧವೂ ದಾಳಿ ನಡೆಸಿರುವ ಬಿಜೆಪಿ, ಸ್ಟಾಲಿನ್ ಪುತ್ರನಿಗೆ ಕಾಂಗ್ರೆಸ್ ಹಾಗೂ INDIA ಮೈತ್ರಿ ಕೂಟ ನೀಡುತ್ತಿರುವ ಬೆಂಬಲವು ತೀರಾ ಗೊಂದಲಗೊಳಿಸುವಂತಿದೆ ಎಂದು ಟೀಕಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News