ಸನಾತನ ಧರ್ಮ ಕುರಿತು ಹೇಳಿಕೆ: ಮದ್ರಾಸ್ ಹೈಕೋರ್ಟ್‌ನಲ್ಲಿ ಪ್ರತಿ ಅಫಿಡವಿಟ್ ಸಲ್ಲಿಸಿದ ಉದಯನಿಧಿ ಸ್ಟಾಲಿನ್
ಚೆನ್ನೈ: ಡಿಎಂಕೆ ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಹಿಂದೂ ಮುನ್ನನಿ ಪದಾಧಿಕಾರಿಗಳು ತಮ್ಮ ವಿರುದ್ಧ ಸಲ್ಲಿಸಿರುವ ಕ್ವೋ ವಾರೆಂಟೊ ರಿಟ್ ಅರ್ಜಿಯನ್ನು ಪ್ರಶ್ನಿಸಿ ಮದ್ರಾಸ್ ಹೈಕೋರ್ಟ್‌ಗೆ ಪ್ರತಿ ಅಫಿಡವಿಟ್ ಸಲ್ಲಿಸಿದ್ದಾರೆ.
ಈ ಸಂಬಂಧ ಉದಯನಿಧಿ ಸ್ಟಾಲಿನ್ ಪರವಾಗಿ ಹಿರಿಯ ವಕೀಲ ಪಿ ವಿಲ್ಸನ್ ಅಫಿಡವಿಟ್ ಸಲ್ಲಿಸಿದ್ದಾರೆ.
ಸನಾತನ ಧರ್ಮ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದ್ದು, ಅದನ್ನು ನಿರ್ಮೂಲನೆ ಮಾಡಬೇಕು ಎಂದು ಕಳೆದ ತಿಂಗಳು ಸ್ಟಾಲಿನ್ ಹೇಳಿದ್ದರು. ನಂತರ ತಮಿಳುನಾಡು ಸರ್ಕಾರದ ಸಚಿವರಾದ ಉದಯನಿಧಿ ಸ್ಟಾಲಿನ್, ಎ ರಾಜಾ ಮತ್ತು ಇತರ 12 ಮಂದಿಗೆ ಸುಪ್ರೀಂ ಕೋರ್ಟ್ ವಿವಾದಕ್ಕೆ ಸಂಬಂಧಿಸಿದಂತೆ ನೋಟಿಸ್ ಜಾರಿ ಮಾಡಿತ್ತು.
ತಮ್ಮ ಅಫಿಡವಿಟ್‌ನಲ್ಲಿ, "ಜಾತಿ ಪ್ರಾಬಲ್ಯದ ಬಗ್ಗೆ ದೃಷ್ಟಿಕೋನವನ್ನು ಇಟ್ಟುಕೊಳ್ಳುವುದು ಮತ್ತು ಎಲ್ಲಾ ಜಾತಿಗಳ ಸಮಾನತೆ ಮತ್ತು ತಾರತಮ್ಯ ನಿರ್ಮೂಲನೆಗಾಗಿ ಬೋಧನೆ ಮಾಡುವುದು ಪ್ರಮಾಣವಚನದ ಉಲ್ಲಂಘನೆಯಲ್ಲ" ಎಂದು ಉದಯನಿಧಿ ಹೇಳಿದ್ದಾರೆ.
ನನಗೆ ಎಲ್ಲಾ ಧರ್ಮಗಳ ಬಗ್ಗೆ ಅಪಾರ ಗೌರವವಿದೆ, ಯಾವುದೇ ನಂಬಿಕೆಯನ್ನು ಕೀಳಾಗಿ ಕಾಣುವ ಅಥವಾ ಅಗೌರವಿಸುವ ಉದ್ದೇಶ ನನಗಿಲ್ಲ. ಅದೇ ಸಮಯದಲ್ಲಿ, ಸಮಾಜದಲ್ಲಿ ಧರ್ಮದ ಹೆಸರಿನಲ್ಲಿ ಚಾಲ್ತಿಯಲ್ಲಿರುವ ವಿಭಜಕ ನಂಬಿಕೆಗಳು ಮತ್ತು ತಾರತಮ್ಯದ ಬಗ್ಗೆ ಮಾತನಾಡುವುದು ನನ್ನ ಕರ್ತವ್ಯ ಎಂದು ಅವರು ಪ್ರತಿ ಅಫಿಡವಿಟ್ ನಲ್ಲಿ ಹೇಳಿದ್ದಾರೆ.
ನನ್ನ ಹೇಳಿಕೆಯನ್ನು ತಪ್ಪಾಗಿ ಗ್ರಹಿಸಲಾಗಿದೆ, ಇದು ಕ್ಷುಲ್ಲಕ ಮತ್ತು ರಾಜಕೀಯ ಪ್ರೇರಿತವಾಗಿದೆ, ಪ್ರಚಾರದ ಸಲುವಾಗಿ ನ್ಯಾಯಾಲಯವನ್ನು ದುರುಪಯೋಗ ಪಡಿಸಿಕೊಳ್ಳುವ ಪ್ರಕರಣ ಇದು ಎಂದು ಅವರು ಹೇಳಿದ್ದಾರೆ.
100 ವರ್ಷಗಳಷ್ಟು ಹಳೆಯದಾದ ದ್ರಾವಿಡ ಸಿದ್ಧಾಂತಕ್ಕೆ ವಿರುದ್ಧವಾಗಿರುವ ಒಂದು ನಿರ್ದಿಷ್ಟ ಸಿದ್ಧಾಂತವು ರಾಜಕೀಯ ಮತ್ತು ಸಾಮಾಜಿಕ ಪ್ರಶ್ನೆಗಳನ್ನು ಇತ್ಯರ್ಥಗೊಳಿಸಲು ನ್ಯಾಯಾಲಯದ ಪ್ರಕ್ರಿಯೆಯನ್ನು ಬಳಸಲು ಪ್ರಯತ್ನಿಸುತ್ತಿದೆ. ದ್ರಾವಿಡ ಸಿದ್ಧಾಂತವು ಸ್ವಾಭಿಮಾನ, ಸಮಾನತೆ, ವೈಚಾರಿಕ ಚಿಂತನೆ ಮತ್ತು ಭ್ರಾತೃತ್ವದ ಬಗ್ಗೆ ಮಾತನಾಡುವಾಗ, ಅದನ್ನು ವಿರೋಧಿಸುವ ಗುಂಪು ಜಾತಿಯ ಆಧಾರದ ಮೇಲೆ ವಿಭಜನೆಯ ಬಗ್ಗೆ ಮಾತನಾಡುತ್ತದೆ ಎಂದು ಸ್ಟಾಲಿನ್ ಹೇಳಿದರು.
ಯಾವುದೇ ವ್ಯಕ್ತಿಯು ನಿರ್ದಿಷ್ಟ ವಿಷಯದ ಬಗ್ಗೆ ದೃಷ್ಟಿಕೋನವನ್ನು ಹೊಂದಿದ್ದಾನೆ ಎಂಬ ಕಾರಣಕ್ಕಾಗಿ ಯಾವುದೇ ವ್ಯಕ್ತಿಯನ್ನು ಸಚಿವ ಸ್ಥಾನದಿಂದ ಅನರ್ಹಗೊಳಿಸಲಾಗುವುದಿಲ್ಲ ಎಂದು ಉದಯನಿಧಿ ಹೇಳಿದ್ದಾರೆ.
ಜಾತಿ ಶ್ರೇಣೀಕರಣ ಸೇರಿದಂತೆ ಅತಾರ್ಕಿಕ ನಂಬಿಕೆಗಳ ದುಷ್ಪರಿಣಾಮಗಳ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವುದು ನಾಯಕರು, ರಾಜಕಾರಣಿಗಳು ಮತ್ತು ಸಮಾಜ ಸುಧಾರಕರಷ್ಟೇ ಅಲ್ಲದೆ ಎಲ್ಲರ ಸಾಂವಿಧಾನಿಕ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.
"ಇಂತಹ ಕಾನೂನನ್ನು ಹಾಕುವುದು ಕೇಂದ್ರ ಸಚಿವ ಸಂಪುಟದ ಮೇಲೂ ಹಾನಿಕಾರಕ ಪರಿಣಾಮವನ್ನು ಬೀರುತ್ತದೆ. ಇತ್ತೀಚಿನ ವರದಿಯ ಪ್ರಕಾರ, ಕೇಂದ್ರ ಸಂಪುಟದಲ್ಲಿರುವ 78 ಸಚಿವರಲ್ಲಿ 33 ಮಂದಿ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳು ಬಾಕಿ ಇವೆ. ನಾಲ್ವರು ಮಂತ್ರಿಗಳು ಕೊಲೆ/ಕೊಲೆ ಯತ್ನಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಹೊಂದಿದ್ದಾರೆ, ಇದು ವೈಯಕ್ತಿಕ ದೃಷ್ಟಿಕೋನ ಅಥವಾ ಧಾರ್ಮಿಕ ಸಿದ್ಧಾಂತದ ಮೇಲಿನ ಅಭಿಪ್ರಾಯಕ್ಕಿಂತ ಹೆಚ್ಚು ಗಂಭೀರವಾಗಿದೆ" ಎಂದು ಅವರು ಹೇಳಿದರು.