ಸಾವರ್ಕರ್ ವಿರೋಧಿ ಹೇಳಿಕೆ : ರಾಹುಲ್‌ಗೆ ಕೋರ್ಟ್ ಸಮನ್ಸ್
ಮುಂಬೈ : ಹಿಂದುತ್ವವಾದಿ ವಿನಾಯಕ ದಾಮೋದರ ಸಾವರ್ಕರ್ ಅವರ ವಿರುದ್ಧ ಆಕ್ಷೇಪಕಾರಿ ಟೀಕೆಗಳನ್ನು ಮಾಡಿದ ಆರೋಪಕ್ಕೆ ಸಂಬಂಧಿಸಿ ಮಾನನಷ್ಟ ಮೊಕದ್ದಮೆಯನ್ನು ಎದುರಿಸುತ್ತಿರುವ ಕಾಂಗ್ರೆಸ್ ಸಂಸದ ರಾಹುಲ್‌ಗಾಂಧಿ ಅವರಿಗೆ ಮಹಾರಾಷ್ಟ್ರದ ನಾಶಿಕ್ ಜಿಲ್ಲಾ ನ್ಯಾಯಾಲವು ಸಮನ್ಸ್ ಜಾರಿಗೊಳಿಸಿದೆ.
ನಾಶಿಕ್‌ನ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ದೀಪಾಲಿ ಪರಿಮಲ್ ಕಡೂಸ್ಕರ್ ಅವರು ಸೆಪ್ಟೆಂಬರ್ 27ರಂದು ರಾಹುಲ್ ಗಾಂಧಿ ಅವರಿಗೆ ಸಮನ್ಸ್ ಜಾರಿಗೊಳಿಸಿದ್ದರು. ಸಾವರ್ಕರ್ ವಿರುದ್ಧ ನೀಡಿದ ಹೇಳಿಕೆಯು ಮಾನವಹಾನಿಕರವೆಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಸಮನ್ಸ್‌ನಲ್ಲಿ ತಿಳಿಸಲಾಗಿದೆ.
ರಾಹುಲ್ ಅವರು ಖುದ್ದಾಗಿ ಇಲ್ಲವೇ ತನ್ನ ಕಾನೂನು ಪ್ರತಿನಿಧಿಯ ಮೂಲಕ ಪ್ರಕರಣದ ಮುಂದಿನ ವಿಚಾರಣಾ ದಿನಾಂಕದಂದು ಹಾಜರಾಗುವಂತೆ ನ್ಯಾಯಾಲಯ ತಿಳಿಸಿದೆ. ಆದರೆ ಮುಂದಿನ ವಿಚಾರಣಾ ದಿನಾಂಕವನ್ನು ಇನ್ನೂ ಕೂಡಾ ನಿರ್ಧರಿಸಲಾಗಿಲ್ಲ.
ಮಹಾರಾಷ್ಟ್ರದ ಹಿಂಗೋಲಿಯಲ್ಲಿ ನಡೆದ ಸುದ್ದಿಗೋಷ್ಠಿಯೊಂದರಲ್ಲಿ ಹಾಗೂ 2022ರ ನವೆಂಬರ್‌ನಲ್ಲಿ ಮಾಡಿದ ಭಾಷಣದಲ್ಲಿ ರಾಹುಲ್ ಅವರು ಸಾವರ್ಕರ್ ವಿರುದ್ಧ ಆಕ್ಷೇಪಕಾರಿ ಹೇಳಿಕೆಗಳನ್ನು ನೀಡಿದ್ದರೆಂದು ದೂರುದಾರರಾದ ಎನ್‌ಜಿಓ ನಿರ್ದೇಶಕರೊಬ್ಬರು ತಿಳಿಸಿದ್ದಾರೆ.
ರಾಹುಲ್ ಗಾಂಧಿ ಅವರು ಎರಡು ಸನ್ನಿವೇಶಗಳಲ್ಲಿ, ತನ್ನ ಮಾತುಗಳಿಂದ ಹಾಗೂ ದೃಶ್ಯ ಮಾಧ್ಯಮಗಳ ಮೂಲಕ ಸಾವರ್ಕರ್ ಅವರ ಪ್ರತಿಷ್ಠೆಗೆ ಹಾನಿ ಮಾಡಿದ್ದರು ಹಾಗೂ ಸಮಾಜದಲ್ಲಿ ಅವರ ವರ್ಚಸ್ಸಿಗೆ ಕಳಂಕ ತರಲು ಯತ್ನಿಸಿದ್ದರು ಎಂದು ಎನ್‌ಜಿಓ ನಿರ್ದೇಶಕ ಆಪಾದಿಸಿದ್ದರು.
ಸಾವರ್ಕರ್ ಅವರು ಬಿಜೆಪಿ ಹಾಗೂ ಆರೆಸ್ಸೆಸ್‌ನ ಪಿಶಾಚಿಯೆಂಬ ಮಾನಹಾನಿಕರ ನಿಂದನೆಯನ್ನು ರಾಹುಲ್ ಮಾಡಿದ್ದಾರೆಂದು ಎನ್‌ಜಿಓ ಆಪಾದಿಸಿದೆ.