RTI ಅರ್ಜಿಯಡಿ ಚುನಾವಣಾ ಬಾಂಡ್ ಗಳ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದ SBI
ಹೊಸದಿಲ್ಲಿ: ಮಾಹಿತಿ ಹಕ್ಕು ಕಾಯ್ದೆ ಅಡಿ ಚುನಾವಣಾ ಬಾಂಡ್ ಗಳ ವಿವರಗಳನ್ನು ಒದಗಿಸಲು ನಿರಾಕರಿಸಿರುವ ಭಾರತೀಯ ಸ್ಟೇಟ್ ಬ್ಯಾಂಕ್(SBI), ಈ ವಿವರಗಳು ಖಾಸಗಿ ಮಾಹಿತಿಗಳಾಗಿದ್ದು, ವಿಶ್ವಾಸಾರ್ಹ ಸಾಮರ್ಥ್ಯದಡಿ ರಕ್ಷಿಸಿಡಲಾಗಿದೆ ಎಂದು ಪ್ರತ್ಯುತ್ತರ ನೀಡಿದೆ.
ಹೀಗಿದ್ದೂ, ಚುನಾವಣಾ ಬಾಂಡ್ ಯೋಜನೆಯು ಅಸಾಂವಿಧಾನಿಕ ಹಾಗೂ ಸ್ಪಷ್ಟವಾಗಿ ನಿರಂಕುಶವಾಗಿದೆ ಎಂದು ಸುಪ್ರೀಂ ಕೋರ್ಟ್ ಆದೇಶಿಸಿದ ನಂತರ, ಚುನಾವಣಾ ಬಾಂಡ್ ಗಳ ವಿವರಗಳನ್ನು ಚುನಾವಣಾ ಆಯೋಗದ ಅಂತರ್ಜಾಲ ತಾಣದಲ್ಲಿ ಪ್ರಕಟಿಸಲಾಗಿದೆ.
RTI ಕಾರ್ಯಕರ್ತ ನಿವೃತ್ತ ಕಮೋಡೋರ್ ಲೋಕೇಶ್ ಬಾತ್ರಾ ಅವರು ಮಾರ್ಚ್ 13ರಂದು ಸುಪ್ರೀಂ ಕೋರ್ಟ್ ಆದೇಶದನ್ವಯ ಚುನಾವಣಾ ಆಯೋಗಕ್ಕೆ ಒದಗಿಸಿರುವ ಚುನಾವಣಾ ಬಾಂಡ್ ಗಳ ವಿವರಗಳ ದತ್ತಾಂಶವನ್ನು ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಒದಗಿಸಬೇಕು ಎಂದು SBIಗೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು.
ಆದರೆ, ಮಾಹಿತಿ ಹಕ್ಕು ಕಾಯ್ದೆಯಡಿ ವಿಶ್ವಾಸಾರ್ಹ ಸಾಮರ್ಥ್ಯದಡಿ ಇಡಲಾಗಿರುವ ದಾಖಲೆಗಳಿಗೆ ಸಂಬಂಧಿಸಿದಂತೆ ಇರುವ ಸೆಕ್ಷನ್ 8(1)(e) ಹಾಗೂ ಖಾಸಗಿ ಮಾಹಿತಿ ಒದಗಿಸುವುದನ್ನು ತಡೆ ಹಿಡಿಯುವ ಸೆಕ್ಷನ್ 8(1)(j) ಎಂಬ ಎರಡು ವಿನಾಯಿತಿ ಅವಕಾಶಗಳನ್ನು ಉಲ್ಲೇಖಿಸಿರುವ ಭಾರತೀಯ ಸ್ಟೇಟ್ ಬ್ಯಾಂಕ್, ಚುನಾವಣಾ ಬಾಂಡ್ ಗಳ ಕುರಿತ ಮಾಹಿತಿಯನ್ನು ಒದಗಿಸಲು ನಿರಾಕರಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಲೋಕೇಶ್ ಬಾತ್ರಾ, ಈಗಾಗಲೇ ಚುನಾವಣಾ ಆಯೋಗದ ಅಂತರ್ಜಾಲ ತಾಣದಲ್ಲಿರುವ ಮಾಹಿತಿಯನ್ನು ಒದಗಿಸಲು ಭಾರತೀಯ ಸ್ಟೇಟ್ ಬ್ಯಾಂಕ್ ನಿರಾಕರಿಸಿರುವುದು ವಿಚಿತ್ರವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.