ರಾಮದೇವ್ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣವನ್ನು ಕೈಬಿಟ್ಟ ಸುಪ್ರೀಂ ಕೋರ್ಟ್
ಹೊಸದಿಲ್ಲಿ: ಪತಂಜಲಿ ಉತ್ಪನ್ನಗಳಿಗೆ ಸಂಬಂಧಿಸಿದ ದಾರಿ ತಪ್ಪಿಸುವ ಜಾಹೀರಾತುಗಳ ಪ್ರಕರಣದಲ್ಲಿ ಯೋಗಗುರು ರಾಮದೇವ್ ಮತ್ತು ಅವರ ಸಹವರ್ತಿ ಆಚಾರ್ಯ ಬಾಲಕೃಷ್ಣ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣವನ್ನು ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ಕೈಬಿಟ್ಟಿದೆ. ನ್ಯಾಯಾಲಯದ ಕ್ರಮದಿಂದ ಉಭಯತರಿಗೂ ಕೊಂಚ ನೆಮ್ಮದಿ ಲಭಿಸಿದೆಯಾದರೂ ಭವಿಷ್ಯದಲ್ಲಿ ತನ್ನ ಆದೇಶಗಳ ಉಲ್ಲಂಘನೆಯ ವಿರುದ್ಧ ನ್ಯಾಯಾಲಯವು ಅವರಿಗೆ ಎಚ್ಚರಿಕೆಯನ್ನೂ ನೀಡಿದೆ.
ರಾಮದೇವ್ ಮತ್ತು ಬಾಲಕೃಷ್ಣ ಅವರ ಕ್ಷಮಾಯಾಚನೆಯನ್ನು ನ್ಯಾಯಾಲಯವು ಒಪ್ಪಿಕೊಳ್ಳುತ್ತದೆ ಎಂದು ತನ್ನ ಆದೇಶದಲ್ಲಿ ತಿಳಿಸಿರುವ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಸಂದೀಪ ಮೆಹ್ತಾ ಅವರ ಪೀಠವು, ‘ಆದರೆ ಈ ಪ್ರಕರಣದಲ್ಲಿ ಈ ಹಿಂದೆ ನಡೆದಂತೆ ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸುವ ಯಾವುದೇ ಕೆಲಸವನ್ನು ಅವರು ಮಾಡಬಾರದು ಎಂದು ನಾವು ಅವರಿಗೆ ಸ್ಪಷ್ಟವಾಗಿ ಮತ್ತು ಕಟ್ಟುನಿಟ್ಟಾಗಿ ಎಚ್ಚರಿಕೆ ನೀಡುತ್ತಿದ್ದೇವೆ’ ಎಂದು ತಿಳಿಸಿತು.
ಪತಂಜಲಿ ಉತ್ಪನ್ನಗಳ ದಾರಿ ತಪ್ಪಿಸುವ ಜಾಹೀರಾತುಗಳಿಗಾಗಿ ಸವೋಚ್ಚ ನ್ಯಾಯಾಲಯವು ರಾಮದೇವ್ ಮತ್ತು ಬಾಲಕೃಷ್ಣರನ್ನು ತೀವ್ರ ತರಾಟೆಗೆತ್ತಿಕೊಂಡಿತ್ತು.