1987ರ ಹಾಶಿಂಪುರ ಹತ್ಯಾಕಾಂಡ ಪ್ರಕರಣ: 8 ಮಂದಿ ಅಪರಾಧಿಗಳಿಗೆ ಸುಪ್ರೀಂಕೋರ್ಟ್ ಜಾಮೀನು

Update: 2024-12-06 11:18 GMT

ಹೊಸದಿಲ್ಲಿ: 1987ರಲ್ಲಿ 38 ಜನರನ್ನು ಹತ್ಯೆ ಮಾಡಲಾಗಿದ್ದ ಕುಖ್ಯಾತ ಹಾಶಿಂಪುರ ಹತ್ಯಾಕಾಂಡ ಪ್ರಕರಣದ ಎಂಟು ಅಪರಾಧಿಗಳಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.

ನಾಲ್ವರು ಅಪರಾಧಿಗಳ ಪರ ವಾದ ಮಂಡಿಸಿದ ಹಿರಿಯ ವಕೀಲ ಅಮಿತ್ ಆನಂದ್ ತಿವಾರಿ, ಈ ಪ್ರಕರಣದಲ್ಲಿ ದಿಲ್ಲಿ ಹೈಕೋರ್ಟ್ ಖುಲಾಸೆಗೊಳಿಸಿದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಿದ ಬಳಿಕ ಅಪರಾಧಿಗಳು ಸುದೀರ್ಘ ಕಾಲದಿಂದ ಜೈಲುವಾಸ ಅನುಭವಿಸುತ್ತಿದ್ದಾರೆ ಎಂದು ಕೋರ್ಟ್ ಗಮನಕ್ಕೆ ತಂದಿದ್ದಾರೆ.

ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಆಗಸ್ಟಿನ್ ಜಾರ್ಜ್ ಮಸಿಹ್ ಅವರನ್ನೊಳಗೊಂಡ ಪೀಠವು ಪ್ರಕರಣಕ್ಕೆ ಸಂಬಂಧಿಸಿ ಎಂಟು ಅಪರಾಧಿಗಳಿಗೆ ಜಾಮೀನು ಮಂಜೂರು ಮಾಡಿದ್ದಾರೆ.

1987ರ ಮೇ 22ರಂದು ಹಾಶಿಂಪುರ ಹತ್ಯಾಕಾಂಡ ನಡೆದಿದೆ. ಉತ್ತರ ಪ್ರದೇಶದ ಮೀರತ್ ನಲ್ಲಿರುವ ಹಾಶಿಂಪುರದಿಂದ ಸರಿಸುಮಾರು 50 ಮುಸ್ಲಿಂ ಯುವಕರನ್ನು ಕೂಡಿಹಾಕಿ, ನಗರದ ಹೊರವಲಯಕ್ಕೆ ಕರೆದೊಯ್ದು, ಅವರ ಮೇಲೆ ಗುಂಡು ಹಾರಿಸಿ ಅವರ ಮೃತದೇಹವನ್ನು ಹತ್ತಿರದ ಕಾಲುವೆಗೆ ಎಸೆಯಲಾಗಿತ್ತು. ಕೆಲ ದಿನಗಳ ನಂತರ ನಾಲೆಯಲ್ಲಿ ಮೃತದೇಹಗಳು ತೇಲುತ್ತಿರುವುದು ಕಂಡು ಬಂದು ಕೊಲೆ ಪ್ರಕರಣ ದಾಖಲಿಸಲಾಗಿತ್ತು. ಪ್ರಾಂತೀಯ ಸಶಸ್ತ್ರ ಪಡೆಯ 19 ಮಂದಿ ಸಿಬ್ಬಂದಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿತ್ತು. ಮೇ 2000ರಲ್ಲಿ 19 ಆರೋಪಿಗಳಲ್ಲಿ 16 ಮಂದಿ ತಪ್ಪಿತಸ್ಥರೆಂದು ಘೋಷಿಸಲಾಗಿತ್ತು. ಉಳಿದ ಮೂವರು ಆರೋಪಿಗಳು ವಿಚಾರಣೆಯ ವೇಳೆ ಮೃತಪಟ್ಟಿದ್ದರು.

ಪ್ರಕರಣಕ್ಕೆ ಸಂಬಂಧಿಸಿ ಸುರೇಶ್ ಚಂದ್ ಶರ್ಮಾ, ನಿರಂಜನ್ ಲಾಲ್, ಕಮಲ್ ಸಿಂಗ್, ರಾಮ್ ಬೀರ್ ಸಿಂಗ್, ಸಮಿ ಉಲ್ಲಾ, ಮಹೇಶ್ ಪ್ರಸಾದ್ ಸಿಂಗ್, ಜೈ ಪಾಲ್ ಸಿಂಗ್, ರಾಮ್ ಧಿಯಾನ್, ಅರುಣ್ ಕುಮಾರ್, ಲೀಲಾ ಧರ್ ಲೋಹ್ನಿ, ಹಮೀರ್ ಸಿಂಗ್, ಕುನ್ವರ್ ಪಾಲ್ ಸಿಂಗ್, ಬುದಾ ಸಿಂಗ್, ಬುಧಿ ಸಿಂಗ್ , ಮೊಹ್ಕಮ್ ಸಿಂಗ್ ಮತ್ತು ಬಸಂತ್ ಬಲ್ಲಭ್ ಗೆ ಶಿಕ್ಷೆ ವಿಧಿಸಲಾಗಿತ್ತು.

2002ರಲ್ಲಿ ಸುಪ್ರೀಂಕೋರ್ಟ್ ಪ್ರಕರಣದ ವಿಚಾರಣೆಯನ್ನು ಗಾಝಿಯಾಬಾದ್ ಜಿಲ್ಲಾ ನ್ಯಾಯಾಲಯದಿಂದ ದಿಲ್ಲಿಯ ಸೆಷೆನ್ಸ್ ನ್ಯಾಯಾಲಯಕ್ಕೆ ವರ್ಗಾಯಿಸಬೇಕೆಂದು ಆದೇಶ ನೀಡಿತ್ತು. 2015ರ ಮಾ. 21ರಂದು 1987ರ ಹಾಶಿಂಪುರ ಹತ್ಯಾಕಾಂಡ ಪ್ರಕರಣದಲ್ಲಿ ಆರೋಪಿತರಾದ ಎಲ್ಲಾ 16 ಆರೋಪಿಗಳನ್ನು ಸೆಷನ್ಸ್ ನ್ಯಾಯಾಲಯವು ಸಾಕ್ಷ್ಯಧಾರದ ಕೊರತೆ ಕಾರಣ ನೀಡಿ ಖುಲಾಸೆಗೊಳಿಸಿತ್ತು. 2018ರ ಅಕ್ಟೋಬರ್ 31ರಂದು ದಿಲ್ಲಿ ಹೈಕೋರ್ಟ್ 16 ಆರೋಪಿಗಳನ್ನು ದೋಷಿಗಳೆಂದು ಘೋಷಿಸಿ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ವಿಚಾರಣಾ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News