"ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗ": ಸನಾತನ ಧರ್ಮ ಕುರಿತ ಹೇಳಿಕೆಗೆ ಉದಯನಿಧಿ ಸ್ಟಾಲಿನ್‌ಗೆ ಸುಪ್ರೀಂ ತರಾಟೆ

Update: 2024-03-04 09:59 GMT

ಉದಯನಿಧಿ ಸ್ಟಾಲಿನ್ (Photo: PTI)

ಹೊಸದಿಲ್ಲಿ: ಸನಾತನ ಧರ್ಮ ಕುರಿತ ಹೇಳಿಕೆ ನೀಡಿದ್ದ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್‌ ಅವರನ್ನು ಸುಪ್ರಿಂ ಕೋರ್ಟ್‌ ಸೋಮವಾರ ತರಾಟೆಗೆ ತೆಗೆದುಕೊಂಡಿದೆ. ವಾಕ್‌ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಂಡು ನಂತರ ನ್ಯಾಯಾಲಯದ ಕದವನ್ನೇಕೆ ತಟ್ಟಿದ್ದೀರಿ ಎಂದು ಸುಪ್ರೀಂ ಕೋರ್ಟ್ ಅವರನ್ನು ಪ್ರಶ್ನಿಸಿದೆ.‌

ನೀವೊಬ್ಬ ಸಚಿವರಾಗಿರುವುದರಿಂದ ನಿಮ್ಮ ಹೇಳಿಕೆಯ ಪರಿಣಾಮಗಳ ಬಗ್ಗೆ ನಿಮಗೆ ತಿಳಿದಿರಬೇಕು ಎಂದು ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಮತ್ತು ದೀಪಾಂಕರ್‌ ದತ್ತಾ ಅವರ ಪೀಠ ಹೇಳಿದೆ.

“ನೀವು ಸಂವಿಧಾನದ ವಿಧಿ 19(1)(ಎ) ಅಡಿಯಲ್ಲಿ ನಿಮ್ಮ ಹಕ್ಕನ್ನು ದುರುಪಯೋಗಪಡಿಸುತ್ತೀರಿ. ವಿಧಿ 25 ಅಡಿಯಲ್ಲಿನ ಹಕ್ಕನ್ನೂ ದುರುಪಯೋಗಪಡಿಸುತ್ತೀರಿ. ಈಗ ನೀವು ವಿಧಿ 32 ಅಡಿಯಲ್ಲಿನ ಹಕ್ಕನ್ನು ಚಲಾಯಿಸುತ್ತೀರಿ. ನಿಮ್ಮ ಮಾತಿನ ಪರಿಣಾಮಗಳ ಬಗ್ಗೆ ನಿಮಗೆ ತಿಳಿದಿದೆಯೇ? ನೀವೊಬ್ಬ ಸಾಮಾನ್ಯ ನಾಗರಿಕನಲ್ಲ. ನೀವೊಬ್ಬ ಸಚಿವ, ಪರಿಣಾಮಗಳ ಬಗ್ಗೆ ತಿಳಿದಿರಬೇಕು,” ಎಂದು ಹೇಳಿದ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಮಾರ್ಚ್‌ 15ಕ್ಕೆ ಮುಂದೂಡಿದೆ.

ತಮಿಳುನಾಡು ಸೀಎಂ ಎಂ ಕೆ ಸ್ಟಾಲಿನ್‌ ಅವರ ಪುತ್ರನಾಗಿರುವ ಉದಯನಿಧಿ ಸ್ಟಾಲಿನ್‌ ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಸಮ್ಮೇಳನವೊಂದರಲ್ಲಿ ಮಾತನಾಡುತ್ತಾ, ಸನಾತನ ಧರ್ಮವು ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ವಿರುದ್ಧವಾಗಿದೆ ಹಾಗೂ ಅದನ್ನು ನಿರ್ಮೂಲನೆಗೈಯ್ಯಬೇಕು ಎಂದು ಹೇಳಿದ್ದು ವಿವಾದಕ್ಕೆ ಕಾರಣವಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News