ಅಂಗವೈಕಲ್ಯ ಕಾಯ್ದೆ ನಿಬಂಧನೆಗಳ ಅನುಷ್ಠಾನಕ್ಕೆ ವಿಫಲ: ಕೇಂದ್ರಕ್ಕೆ ಸುಪ್ರೀಂ ಛೀಮಾರಿ

Update: 2024-07-10 09:44 GMT

ಹೊಸದಿಲ್ಲಿ: 2009ರ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಶೇಕಡ 100ರಷ್ಟು ದೃಷ್ಟಿಮಾಂದ್ಯತೆ ಇರುವ ಅಭ್ಯರ್ಥಿಯನ್ನು ಮೂರು ತಿಂಗಳ ಒಳಗಾಗಿ ನೇಮಕ ಮಾಡುವಂತೆ ಸುಪ್ರೀಂಕೋರ್ಟ್ ಬುಧವಾರ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಜತೆಗೆ ಅಂಗವೈಕಲ್ಯತೆ ಹೊಂದಿರುವ ವ್ಯಕ್ತಿಗಳ ಕಾಯ್ದೆಯ ನಿಬಂಧನೆಗಳನ್ನು ಅನುಷ್ಠಾನಕ್ಕೆ ತಾರದೇ ಇರುವ ಬಗ್ಗೆ ಹಾಗೂ ಬ್ಯಾಕ್‍ಲಾಗ್ ಅಭ್ಯರ್ಥಿಗಳನ್ನು ತುಂಬದೇ ಇರುವ ಬಗ್ಗೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ನ್ಯಾಯಮೂರ್ತಿಗಳಾದ ಅಕ್ಷಯ್ ಎಸ್. ಓಕಾ ಮತ್ತು ಪಂಕಜ್ ಮಿತ್ತಲ್ ಅವರನ್ನೊಳಗೊಂಡ ನ್ಯಾಯಪೀಠ, ಪಿಡಬ್ಲ್ಯೂಡಿ ಕಾಯ್ದೆ-1995ರ ಅನುಷ್ಠಾನದಲ್ಲಿ ಕೇಂದ್ರ ಸರ್ಕಾರದ ಸಂಪೂರ್ಣ ಲೋಪ ಎದ್ದು ಕಾಣುತ್ತದೆ ಎಂದು ಟೀಕಿಸಿದೆ.

"ದುರಾದೃಷ್ಟವಶಾತ್ ಈ ಪ್ರಕರಣದಲ್ಲಿ, ಎಲ್ಲ ಹಂತಗಳಲ್ಲಿ ಅರ್ಜಿದಾರರು ತೆಗೆದುಕೊಂಡಿರುವ ನಿಲುವು ಅಂಗವೈಕಲ್ಯ ಹೊಂದಿದ ವ್ಯಕ್ತಿಗಳ ಪ್ರಯೋಜನಕ್ಕಾಗಿ ಇರುವ ಕಾನೂನು ಜಾರಿಗೊಳಿಸಿದ ಉದ್ದೇಶವನ್ನೇ ಸೋಲಿಸುವಂತಿದೆ. ಅರ್ಜಿದಾರರು ಅಂಗವೈಕಲ್ಯ ಹೊಂದಿದ ವ್ಯಕ್ತಿಗಳ (ಸಮಾನ ಅವಕಾಶ, ಹಕ್ಕುಗಳ ರಕ್ಷಣೆ ಮತ್ತು ಸಂಪೂರ್ಣ ಪಾಳ್ಗೊಳ್ಳುವಿಕೆ) ಕಾಯ್ದೆ-1995ನ್ನು ಅನುಷ್ಠಾನಗೊಳಿಸಿದ್ದರೆ, ಪ್ರತಿವಾದಿ ನಂಬರ್ 1 (ದೃಷ್ಟಿಮಾಂದ್ಯ ಅಭ್ಯರ್ಥಿ) ನ್ಯಾಯಕ್ಕಾಗಿ ಅಲೆದಾಡುವ ಪ್ರಮೇಯ ಬರುತ್ತಿರಲಿಲ್ಲ ಎಂದು ನ್ಯಾಯಪೀಠ ಹೇಳಿದೆ.

ಈ ಪ್ರಕರಣದಲ್ಲಿ ಪಂಕಜ್ ಕುಮಾರ್ ಶ್ರೀವಾಸ್ತವ ಎಂಬ ಶೇಕಡ 100ರಷ್ಟು ದೃಷ್ಟಿಮಾಂದ್ಯತೆ ಹೊಂದಿರುವ ಅಭ್ಯರ್ಥಿ ನಾಗರಿಕ ಸೇವಾ ಪರೀಕ್ಷೆ-2008ರಲ್ಲಿ ಉತ್ತೀರ್ಣರಾಗಿದ್ದರು. ಇವರು ಐಎಎಸ್, ಐಆರ್‍ಎಸ್, ಐಆರ್‍ಪಿಎಸ್ ಹಾಗೂ ಐಆರ್‍ಎಸ್ ಸಿ&ಇ ಹೀಗೆ ನಾಲ್ಕು ಆಯ್ಕೆಗಳನ್ನು ನೀಡಿದ್ದರು.

ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ನಡೆಸಿದ ಬಳಿಕವೂ ಇವರಿಗೆ ನೇಮಕಾತಿ ನಿರಾಕರಿಸಲಾಗಿತ್ತು. ಅವರು 2010ರಲ್ಲಿ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿಯ ಮೊರೆ ಹೋದರು. ಈ ಹಿನ್ನೆಲೆಯಲ್ಲಿ ಪಿಡಬ್ಲ್ಯೂಡಿ ಕಾಯ್ದೆ-1995ನ್ನು ಅನುಸರಿಸಿ ಬ್ಯಾಕ್‍ಲಾಗ್ ಖಾಲಿ ಹುದ್ದೆಗಳನ್ನು ಆರು ತಿಂಗಳ ಒಳಗಾಗಿ ಪಟ್ಟಿ ಮಾಡುವಂತೆ ನ್ಯಾಯಮಂಡಳಿ ಆದೇಶಿಸಿತ್ತು. ಕೇಂದ್ರ ಸರ್ಕಾರಕ್ಕೂ ಸ್ಪಷ್ಟ ಸೂಚನೆ ನೀಡಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News