REIT ಕುರಿತು ಏನಾದರೂ ಮಾತನಾಡಿದರೆ, ಹಿತಾಸಕ್ತಿ ಸಂಘರ್ಷದ ಆರೋಪಕ್ಕೆ ಗುರಿಯಾಗುತ್ತೇನೆ : ಸೆಬಿ ಮುಖ್ಯಸ್ಥೆ

Update: 2024-09-02 15:16 GMT

 ಮಾಧಬಿ ಪುರಿ ಬುಚ್ | PC : PTI

ಮುಂಬೈ: ಹೂಡಿಕೆ ವಾಹಕ ರಿಯಲ್ ಎಸ್ಟೇಟ್ ಇನ್ವೆಸ್ಟ್ ಮೆಂಟ್ ಟ್ರಸ್ಟ್ಸ್ ಕುರಿತು ಯಾವುದೇ ಹೇಳಿಕೆ ನೀಡುವುದರಿಂದ ಅಂತರ ಕಾಯ್ದುಕೊಂಡ ಸೆಬಿ ಮುಖ್ಯಸ್ಥೆ ಮಾಧಬಿ ಪುರಿ ಬುಚ್, ನಾನೇದರೂ ಹೇಳಿಕೆ ನೀಡಿದರೆ, ಹಿತಾಸಕ್ತಿ ಸಂಘರ್ಷದ ಆರೋಪಕ್ಕೆ ಗುರಿಯಾಗಲಿದ್ದೇನೆ ಎಂದು ಹೇಳಿದ್ದಾರೆ.

ಬುಚ್ ಹಾಗೂ ಖಾಸಗಿ ಈಕ್ವಿಟಿ ಮುಂಚೂಣಿ ಸಂಸ್ಥೆ ಬ್ಲ್ಯಾಕ್ ಸ್ಟೋನ್ ನಡುವಿನ ಪ್ರಬಲವಾದ ಹಿತಾಸಕ್ತಿ ಸಂಘರ್ಷದ ಕುರಿತು ಅಮೆರಿಕ ಕಿರು ಮಾರಾಟ ಸಂಸ್ಥೆ ಹಿಂಡೆನ್ ಬರ್ಗ್ ರಿಸರ್ಚ್ ಪ್ರಶ್ನೆಗಳನ್ನೆತ್ತಿರುವುದರಿಂದ, ಅವರಿಂದ ಈ ಹೇಳಿಕೆ ಹೊರ ಬಿದ್ದಿದೆ.

ಮಾಧಬಿ ಬುಚ್ ಅವರ ಪತಿ ಧವಲ್ ಬುಚ್ ಅವರು REIT ಸಂಸ್ಥೆಯಲ್ಲಿ ಪ್ರಮುಖ ಪಾಲುದಾರಿಕೆ ಹೊಂದಿರುವ ಬ್ಲ್ಯಾಕ್ ಸ್ಟೋನ್ ನಲ್ಲಿ ಹಿರಿಯ ಸಲಹೆಗಾರರಾಗಿದ್ದಾರೆ. ಆದರೆ, ಈ ಆರೋಪಗಳನ್ನು ದಂಪತಿಗಳು ಅಲ್ಲಗಳೆದಿದ್ದಾರೆ. ಅಲ್ಲದೆ, ಸೆಬಿಯು REIT ಸಂಸ್ಥೆಯ 2014ರ ನಿಯಮಗಳಿಗೆ ಇತ್ತೀಚೆಗೆ ಮಾಡಿರುವ ತಿದ್ದುಪಡಿಗಳಿಂದ ನಿರ್ದಿಷ್ಟ ಹಣಕಾಸು ಸಮೂಹ ಸಂಸ್ಥೆಗಳಿಗೆ ಲಾಭವಾಗಿದೆ ಎಂದೂ ಹಿಂಡೆನ್ ಬರ್ಗ್ ರಿಸರ್ಚ್ ಸಂಸ್ಥೆ ಆರೋಪಿಸಿತ್ತು. ಆದರೆ, ಈ ಆರೋಪವನ್ನು ಸೆಬಿ ಅಲ್ಲಗಳೆದಿದೆ.

ಕೈಗಾರಿಕೋದ್ಯಮಗಳ ಸಂಘಟನೆ ಸಿಐಐ ಆಯೋಜಿಸಿದ್ದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಬುಚ್, “ನಾನು REIT ಬಗ್ಗೆ ಒಂದೇ ಒಂದು ಮಾತಾಡಿದರೂ, ಹಿತಾಸಕ್ತಿ ಸಂಘರ್ಷದ ಆರೋಪಕ್ಕೆ ಗುರಿಯಾಗಲಿದ್ದೇನೆ” ಎಂದು ಹೇಳಿದರು.

ರಿಯಲ್ ಎಸ್ಟೇಟ್ ಇನ್ವೆಸ್ಟ್ ಮೆಂಟ್ ಟ್ರಸ್ಟ್ಸ್ ಪರಿಕಲ್ಪನೆಯು ಭಾರತದ ಮಾರುಕಟ್ಟೆ ಪಾಲಿಗೆ ಹೊಸತಾಗಿದ್ದರೂ, ತನ್ನ ಆಕರ್ಷಕ ಲಾಭ ಹಾಗೂ ಹೂಡಿಕೆಯ ಬಗೆಗಿನ ಶ್ಲಾಘನೆಗಾಗಿ ಜಗತ್ತಿನಾದ್ಯಂತ ಜನಪ್ರಿಯ ಆಯ್ಕೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News