ಸೆಬಿ ಮುಖ್ಯಸ್ಥೆ ಸಲಹಾ ಸಂಸ್ಥೆಗಳ ಮೂಲಕ ಮಹೀಂದ್ರ, ಇತರ ಐದು ಕಂಪನಿಗಳಿಂದ ಕೋಟ್ಯಂತರ ರೂ.ಗಳಿಸಿದ್ದಾರೆ: ಕಾಂಗ್ರೆಸ್ ಆರೋಪ

Update: 2024-09-10 10:02 GMT

ಸೆಬಿ ಮುಖ್ಯಸ್ಥೆ ಮಾಧವಿ ಪುರಿ ಬುಚ್ (PTI)

ಹೊಸದಿಲ್ಲಿ: ಸೆಬಿ ಮುಖ್ಯಸ್ಥೆ ಮಾಧವಿ ಪುರಿ ಬುಚ್ ವಿರುದ್ಧ ತನ್ನ ದಾಳಿಯನ್ನು ಮಂಗಳವಾರ ಇನ್ನಷ್ಟು ತೀವ್ರಗೊಳಿಸಿದ ಕಾಂಗ್ರೆಸ್,ಅವರು ಸೆಬಿಯ ಪೂರ್ಣಾವಧಿ ಸದಸ್ಯೆಯಾದ ಬಳಿಕ ತನ್ನ ಸಲಹಾ ಸಂಸ್ಥೆ ಅಗೋರಾ ಅಡ್ವೈಸರಿ ಪ್ರೈ.ಲಿ.ಮೂಲಕ ಮಹೀಂದ್ರ ಆ್ಯಂಡ್ ಮಹೀಂದ್ರದಂತಹ ಕಂಪನಿಗಳಿಂದ 2.95 ಕೋಟಿ ರೂ.ಗಳನ್ನು ಗಳಿಸಿದ್ದರು ಎಂದು ಹೇಳಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಪವನ ಖೇರಾ ಅವರು,ತಾನು ಸೆಬಿಯನ್ನು ಸೇರಿದ ಬಳಿಕ ಅಗೋರಾ ನಿಷ್ಕ್ರಿಯಗೊಂಡಿತ್ತು ಎಂಬ ಬುಚ್ ಹೇಳಿಕೆಗೆ ವ್ಯತಿರಿಕ್ತವಾಗಿ ಸಲಹಾ ಸಂಸ್ಥೆಯು ಸೇವೆಗಳನ್ನು ಮುಂದುವರಿಸಿತ್ತು ಮತ್ತು 2016-2024ರ ನಡುವೆ 2.95 ಕೋಟಿ ರೂ.ಗಳ ಆದಾಯವನ್ನು ಗಳಿಸಿತ್ತು ಎಂದು ಪ್ರತಿಪಾದಿಸಿದರು.

2024,ಮಾ.31ಕ್ಕೆ ಇದ್ದಂತೆ ಬುಚ್ ಈಗಲೂ ಅಗೋರಾದಲ್ಲಿ ಶೇ.99ರಷ್ಟು ಪಾಲು ಬಂಡವಾಳವನ್ನು ಹೊಂದಿದ್ದಾರೆ. ಕಂಪನಿಯಲ್ಲಿನ ಪಾಲು ಬಂಡವಾಳ ಕುರಿತು ಸುಳ್ಳು ಹೇಳಿದ್ದಕ್ಕಾಗಿ ಅವರು ರೆಡ್-ಹ್ಯಾಂಡೆಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಇದು ಉದ್ದೇಶಪೂರ್ವಕವಾಗಿ ಮಾಹಿತಿಯನ್ನು ಬಚ್ಚಿಟ್ಟ ಪ್ರಕರಣವಾಗಿದೆ ಎಂದರು.

ಮಹೀಂದ್ರ ಆ್ಯಂಡ್ ಮಹೀಂದ್ರ ಅಲ್ಲದೆ ಡಾ.ರೆಡ್ಡೀಸ್,ಪಿಡಿಲೈಟ್,ಐಸಿಐಸಿಐ, ಸೆಂಬ್‌ಕಾರ್ಪ್ ಮತ್ತು ವಿಸು ಲೀಸಿಂಗ್ ಆ್ಯಂಡ್ ಫೈನಾನ್ಸ್ ಅಗೋರಾದಿಂದ ಸಲಹಾ ಸೇವೆಗಳನ್ನು ಪಡೆದಿದ್ದವು ಎಂದು ಖೇರಾ ಹೇಳಿದರು.

2017-24ರ ನಡುವೆ ಐಸಿಐಸಿಐ ಬ್ಯಾಂಕಿನಲ್ಲಿ ಹುದ್ದೆಯನ್ನು ಹೊಂದಿದ್ದ ಬುಚ್ 16.80 ಕೋಟಿ ರೂ.ಆದಾಯ ಪಡೆದಿದ್ದರು ಎಂದು ಕಾಂಗ್ರೆಸ್ ಕಳೆದ ತಿಂಗಳು ಆರೋಪಿಸಿತ್ತು. ಆದರೆ, ಬುಚ್‌ಗೆ ಯಾವುದೇ ವೇತನ ನೀಡಿದ್ದನ್ನು ಐಸಿಐಸಿಐ ಹೇಳಿಕೆಯಲ್ಲಿ ನಿರಾಕರಿಸಿತ್ತು. 

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News