ಮಹಾಯುತಿ ಸರಕಾರದಲ್ಲಿ ಆಂತರಿಕ ಬಿಕ್ಕಟ್ಟು | ಶಿಂಧೆ ನೇತೃತ್ವದ ಶಿವಸೇನೆಯ 20 ಶಾಸಕರ ಭದ್ರತೆ ಹಿಂಪಡೆದ ಗೃಹ ಇಲಾಖೆ: ವರದಿ

Update: 2025-02-18 13:01 IST
Photo of Devendra Fadnavis and Eknath Shinde

Photo credit: PTI

  • whatsapp icon

ಮುಂಬೈ: ಮಹಾರಾಷ್ಟ್ರದ ಮಹಾಯುತಿ ಸರಕಾರದಲ್ಲಿನ ಬಿಕ್ಕಟ್ಟು ದಿನೇದಿನೇ ಉಲ್ಬಣಗೊಳ್ಳತೊಡಗಿದೆ ಎನ್ನಲಾಗುತ್ತಿದ್ದು, ಈ ನಡುವೆ, ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅಡಿಯ ಗೃಹ ಇಲಾಖೆಯು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ಸುಮಾರು 20 ಶಾಸಕರಿಗೆ ಒದಗಿಸಲಾಗಿದ್ದ Y ಶ್ರೇಣಿ ಭದ್ರತೆಯನ್ನು ಹಿಂಪಡೆದಿದೆ ಎಂದು ವರದಿಯಾಗಿದೆ. ಇದರೊಂದಿಗೆ, ಬಿಜೆಪಿ ಹಾಗೂ ಅಜಿತ್ ಪವಾರ್ ನೇತೃತ್ವದ ಎನ್ಸಿಪಿಯ ಕೆಲವು ಶಾಸಕರ ಭದ್ರತೆಯನ್ನೂ ಕಡಿತಗೊಳಿಸಲಾಗಿದ್ದರೂ, ಶಿವಸೇನೆ ಶಾಸಕರಿಗೆ ಹೋಲಿಸಿದರೆ, ಈ ಸಂಖ್ಯೆ ತೀರಾ ಕಡಿಮೆ ಎಂದು indiatoday.in ವರದಿ ಮಾಡಿದೆ.

ರಾಜ್ಯದ ಸಂಪನ್ಮೂಲಗಳ ದುರ್ಬಳಕೆಯನ್ನು ತಪ್ಪಿಸುವ ಕ್ರಮದ ಭಾಗವಾಗಿ ದೇವೇಂದ್ರ ಫಡ್ನವಿಸ್ ನೇತೃತ್ವದ ಸರಕಾರ ಈ ಉಪಕ್ರಮಕ್ಕೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಈ ಶಿವಸೇನೆಯ ಶಾಸಕರು ಸಚಿವರಲ್ಲದಿದ್ದರೂ, ಹೆಚ್ಚುವರಿಯಾಗಿ Y ಶ್ರೇಣಿಯ ಭದ್ರತೆಯನ್ನು ಒದಗಿಸಲಾಗಿತ್ತು. 2022ರಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯಿಂದ ಈ ಶಾಸಕರು ಪಕ್ಷಾಂತರ ಮಾಡಿದ ನಂತರ, ಅವರಿಗೆ ಈ ಭದ್ರತೆಯನ್ನು ಒದಗಿಸಲಾಗಿತ್ತು. ಇದರ ಬೆನ್ನಿಗೇ, ಮಹಾವಿಕಾಸ್ ಅಘಾಡಿ ಸರಕಾರ ಪತನಗೊಂಡಿತ್ತು.

ದೇವೇಂದ್ರ ಫಡ್ನವಿಸ್ ತಮ್ಮ ಅಧಿಕಾರ ವ್ಯಾಪ್ತಿಯನ್ನು ಮನವರಿಕೆ ಮಾಡಲು ಈ ವ್ಯೂಹಾತ್ಮಕ ತಂತ್ರ ಅನುಸರಿಸಿದ್ದಾರೆ ಎಂದು ಹೇಳಲಾಗಿದ್ದು, ಇದರಿಂದ ಶಿಂದೆ ನೇತೃತ್ವದ ಶಿವಸೇನೆ ಹಾಗೂ ಬಿಜೆಪಿ ನಡುವಿನ ಬಿಕ್ಕಟ್ಟು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಊಹಿಸಲಾಗಿದೆ.

ರಾಯಗಢ ಹಾಗೂ ನಾಶಿಕ್ ಜಿಲ್ಲೆಗಳ ಉಸ್ತುವಾರಿ ಸಚಿವರ ಹುದ್ದೆಗಳ ಬಗೆಗಿನ ಭಿನ್ನಾಭಿಪ್ರಾಯ ಇನ್ನೂ ಬಗೆಯರಿಯದೆ ಇರುವುದರಿಂದ, ಬಿಜೆಪಿ ಮತ್ತು ಶಿಂದೆ ನೇತೃತ್ವದ ಶಿವಸೇನೆ ನಡುವೆ ತಿಕ್ಕಾಟ ನಡೆಯುತ್ತಿದ್ದು, ಈ ತಿಕ್ಕಾಟ ಇನ್ನಿತರ ಪ್ರದೇಶಗಳಿಗೂ ಹರಡಿಕೊಂಡಿದೆ.

ಕಳೆದ ತಿಂಗಳು ದಾವೋಸ್ ನಲ್ಲಿ ಆಯೋಜನೆಗೊಂಡಿದ್ದ ಜಾಗತಿಕ ಆರ್ಥಿಕ ವೇದಿಕೆ ಶೃಂಗಸಭೆಗೆ ತೆರಳುವುದಕ್ಕೂ ಮುನ್ನ, ಎನ್ಸಿಪಿಯ ತತ್ಕರೆ(ಶ್ರೀವರ್ಧನ್)ರನ್ನು ದೇವೇಂದ್ರ ಫಡ್ನವಿಸ್ ರಾಯಗಢದ ಉಸ್ತುವಾರಿ ಸಚಿವರನ್ನಾಗಿ ನೇಮಿಸಿದ್ದರು. ಆದರೆ, ತಮಗೆ ಮುಖ್ಯಮಂತ್ರಿ ಹುದ್ದೆ ನಿರಾಕರಿಸಿದ್ದರಿಂದ ಅಸಮಾಧಾನಗೊಂಡಿದ್ದ ಏಕನಾಥ್ ಶಿಂದೆ, ದೇವೇಂದ್ರ ಫಡ್ನವಿಸ್ ರ ಈ ನಡೆಯಿಂದ ಮತ್ತಷ್ಟು ಅಸಮಾಧಾನಗೊಂಡರು ಎನ್ನಲಾಗಿದೆ.

ರಾಯಗಢ ಜಿಲ್ಲೆಯಲ್ಲಿ ತಮ್ಮ ಪಕ್ಷವು ಸಾಕಷ್ಟು ಪ್ರಭಾವ ಹೊಂದಿರುವುದರಿಂದ, ಶಿವಸೇನೆಯ ನಾಯಕರೊಬ್ಬರನ್ನು ರಾಯಗಢ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿಸಬೇಕು ಎಂದು ಏಕನಾಥ್ ಶಿಂದೆ ಬಯಸಿದ್ದರು. ಹೀಗಾಗಿ, ಶಿಂದೆಯನ್ನು ಸಮಾಧಾನಗೊಳಿಸಲು ತತ್ಕರೆಯ ನೇಮಕಾತಿಯನ್ನು ತಡೆ ಹಿಡಿಯಲಾಗಿತ್ತು.

ದೇವೇಂದ್ರ ಫಡ್ನವಿಸ್ ರೊಂದಿಗೆ ವೇದಿಕೆ ಹಂಚಿಕೊಳ್ಳುವುದನ್ನು ಏಕನಾಥ್ ಶಿಂದೆ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಕಳೆದ ತಿಂಗಳು ದೇವೇಂದ್ರ ಫಡ್ನವಿಸ್ ಕರೆದಿದ್ದ ನಾಶಿಕ್ ಮಹಾನಗರ ಪಾಲಿಕೆ ಪ್ರಾಂತೀಯ ಅಭಿವೃದ್ಧಿ ಪ್ರಾಧಿಕಾರದ ಸಭೆಗೆ ಶಿಂದೆ ಗೈರಾಗಿದ್ದರು. ಅಲ್ಲದೆ, ಅವರು ಪಿಂಪ್ರಿ-ಚಿಂಚ್ವಾಡ್ ಪೊಲೀಸ್ ಕಮಿಷನರೇಟ್ ನ ಉದ್ಘಾಟನಾ ಸಮಾರಂಭದಿಂದಲೂ ದೂರ ಉಳಿದಿದ್ದರು.

ಆಡಳಿತಾರೂಢ ಮಹಾಯುತಿ ಸರಕಾರದಲ್ಲಿನ ತಿಕ್ಕಾಟದ ಬಗ್ಗೆ ವ್ಯಂಗ್ಯವಾಡಿರುವ ಶಿವಸೇನೆ (ಉದ್ಧವ್ ಬಣ) ಸಂಸದೆ ಪ್ರಿಯಾಂಕಾ ಚತುರ್ವೇದಿ, “ಈ ತಿಂಗಳು ಮಹಾಯುತಿ ಸರಕಾರ ವ್ಯಾಲೆಂಟೈನ್ಸ್ ದಿನವನ್ನು ಆಚರಿಸುತ್ತಿದೆ, ಅಲ್ಲವೆ?” ಎಂದು ಛೇಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News