ಔಷಧ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿದ್ದ ಏಳು ಸಂಸ್ಥೆಗಳಿಂದ ಚುನಾವಣಾ ಬಾಂಡ್ ಖರೀದಿ

Update: 2024-03-19 06:51 GMT

ಹೊಸದಿಲ್ಲಿ: ಭಾರತದಲ್ಲಿನ 35 ಔಷಧ ಕಂಪನಿಗಳು ಸುಮಾರು ರೂ. 1,000 ಕೋಟಿ ಮೌಲ್ಯದ ದೇಣಿಗೆಯನ್ನು ಚುನಾವಣಾ ಬಾಂಡ್ ಮೂಲಕ ದೇಣಿಗೆ ನೀಡಿರುವುದು ಮಾರ್ಚ್ 14ರಂದು ಚುನಾವಣಾ ಆಯೋಗವು ಬಹಿರಂಗಪಡಿಸಿರುವ ದತ್ತಾಂಶಗಳಿಂದ ತಿಳಿದು ಬಂದಿದೆ. ಈ ಪೈಕಿ ಏಳು ಕಂಪನಿಗಳು ಚುನಾವಣಾ ಬಾಂಡ್ ಖರೀದಿಸಿದಾಗ, ಅವುಗಳ ಔಷಧ ಗುಣಮಟ್ಟ ಕಳಪೆಯಾಗಿದೆ ಎಂದು ತನಿಖೆಗೊಳಗಾಗಿವೆ. ಔಷಧ ತಯಾರಕರು ಔಷಧ ಮತ್ತು ಪ್ರಸಾಧನ ಸಾಮಗ್ರಿಗಳು ಕಾಯ್ದೆ, 1940ರ ಅಡಿ ನಿಯಂತ್ರಿಸಲ್ಪಡುತ್ತಿದ್ದು, ಮಾರುಕಟ್ಟೆಗೆ ಮಾರಾಟ ಮಾಡಲಾಗುವ ಔಷಧಗಳ ಗುಣಮಟ್ಟ ಹಾಗೂ ತಯಾರಿಕಾ ಘಟಕದ ತಪಾಸಣೆ ಮಾಡಲು ಈ ಕಾಯ್ದೆಯು ರಾಜ್ಯ ನಿಯಂತ್ರಿತ ಆಹಾರ ಮತ್ತು ಔಷಧ ಆಡಳಿತಾಧಿಕಾರಗಳಿಗೆ ಅಧಿಕಾರ ನೀಡುತ್ತದೆ.

ಈ ಕಾಯ್ದೆಯಡಿ ಯಾವುದೇ ಆಹಾರ ಮತ್ತು ಔಷಧ ಆಡಳಿತವು ಒಂದು ವೇಳೆ ಔಷಧ ಗುಣಮಟ್ಟ ಕಳಪೆಯಾಗಿದ್ದರೆ, ಅಂತಹ ತಯಾರಿಕಾ ಘಟಕಗಳಿಗೆ ನೋಟಿಸ್ ರವಾನಿಸಬಹುದಾಗಿದೆ. ಆದರೆ, ತಯಾರಿಕಾ ಪರವಾನಗಿಯ ಅಮಾನತು ಅಥವಾ ತಯಾರಿಕಾ ಪರವಾನಗಿಯ ರದ್ದುವಿನಂತಹ ದಂಡನಾ ಕ್ರಮಗಳನ್ನು ಔಷಧ ತಯಾರಿಕಾ ಸಂಸ್ಥೆ ಇರುವ ರಾಜ್ಯದಲ್ಲಿನ ಸರಕಾರವೇ ಕೈಗೊಳ್ಳಬೇಕಾಗುತ್ತದೆ.

ಯಾವ ಕಾರಣಕ್ಕೆ ಔಷಧ ಕಂಪನಿಗಳು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿವೆ ಎಂಬ ಕುರಿತು ದೇಣಿಗೆದಾರರು ಹಾಗೂ ದೇಣಿಗೆ ಸ್ವೀಕರಿಸುವವರ ನಡುವೆ ಚುನಾವಣಾ ಬಾಂಡ್ ನ ವಿಶಿಷ್ಟ ಸಂಖ್ಯೆಯು ಹೊಂದಾಣಿಕೆಯಾಗಿ, ಸಾರ್ವಜನಿಕಗೊಂಡ ನಂತರವಷ್ಟೇ ಸ್ಪಷ್ಟವಾಗಲಿದೆ.

ರಾಜ್ಯ ಆಹಾರ ಮತ್ತು ಔಷಧ ಆಡಳಿತಗಳಿಂದ ನೋಟಿಸ್ ಸ್ವೀಕರಿಸಿದ ವರ್ಷಗಳಲ್ಲಿ ಚುನಾವಣಾ ಬಾಂಡ್ ಖರೀದಿಸಿರುವ ಔಷಧ ತಯಾರಿಕಾ ಸಂಸ್ಥೆಗಳ ಪಟ್ಟಿ ಈ ಕೆಳಗಿನಂತಿದೆ:

1. ಹೆಟೆರೊ ಲ್ಯಾಬ್ಸ್ ಆ್ಯಂಡ್ ಹೆಟೆರೊ ಹೆಲ್ತ್ ಕೇರ್: ಈ ಸಂಸ್ಥೆ ಯು ಎಪ್ರಿಲ್ 2022ರಲ್ಲಿ ರೂ. 39 ಕೋಟಿ ಮೊತ್ತದ ಚುನಾವಣಾ ಬಾಂಡ್ ಗಳನ್ನು ಖರೀದಿಸಿತ್ತು. ಇದಕ್ಕೂ ಹತ್ತು ತಿಂಗಳ ಮುನ್ನ ಈ ಹೈದರಾಬಾದ್ ಮೂಲದ ಸಂಸ್ಥೆಗೆ ಕಳಪೆ ಔಷಧಗಳನ್ನು ತಯಾರಿಸಲಾಗುತ್ತಿದೆ ಎಂದು ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ ಸಂಸ್ಥೆಯು ಆರು ನೋಟಿಸ್ ಗಳನ್ನು ಜಾರಿಗೊಳಿಸಿತ್ತು.

ಈ ಪೈಕಿ ಕನಿಷ್ಠ ಮೂರು ನೋಟಿಸ್ ಗಳು ರೆಮ್ಡೆಸಿವಿರ್ ಔಷಧಕ್ಕೆ ಸಂಬಂಧಿಸಿದ್ದಾಗಿದ್ದು, ಕೋವಿಡ್ 19 ಚಿಕಿತ್ಸೆಗಾಗಿ ಈ ಔಷಧವನ್ನು ವ್ಯಾಪಕವಾಗಿ ಬಳಸಲಾಗಿತ್ತು ಹಾಗೂ ಹೆಟೆರೊ ಸಂಸ್ಥೆಯು ಸಾಂಕ್ರಾಮಿಕದಲ್ಲಿ ತನ್ನ ವಹಿವಾಟನ್ನು ವಿಸ್ತರಿಸಿಕೊಳ್ಳಲು ಸಾಧ್ಯವಾಗಿತ್ತು.

2. ಟೊರೆಂಟ್ ಫಾರ್ಮಾ: ಈ ಸಂಸ್ಥೆಯು ಮೇ 2019ರಿಂದ ಜನವರಿ 2024ರ ನಡುವೆ ಒಟ್ಟು ರೂ. 77.5 ಕೋಟಿ ಮೊತ್ತದ ಚುನಾವಣಾ ಬಾಂಡ್ ಗಳನ್ನು ಖರೀದಿಸಿದೆ.

ಗುಜರಾತ್ ಮೂಲದ ಈ ಸಂಸ್ಥೆಯು ಆ್ಯಂಟಿ ಪ್ಲೇಟ್ ಲೆಟ್ ಔಷಧವಾದ ಡೆಪ್ಲಾಟ್-150ಯ ಸ್ಯಾಲಿಸಿಲಿಕ್ ಆ್ಯಸಿಡ್ ಪರೀಕ್ಷೆಯಲ್ಲಿ ವಿಫಲವಾಗಿತ್ತು ಹಾಗೂ ಈ ಔಷಧವನ್ನು ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ ಸಂಸ್ಥೆಯು 2018ರಲ್ಲಿ ಕಳಪೆ ಎಂದು ಘೋಷಿಸಿತ್ತು.

3. ಝೈಡಸ್ ಹೆಲ್ತ್ ಕೇರ್: 2022-2023ರ ನಡುವೆ ಈ ಸಂಸ್ಥೆಯು ರೂ. 29 ಕೋಟಿ ಮೌಲ್ಯದ ಚುನಾವಣಾ ಬಾಂಡ್ ಗಳನ್ನು ಖರೀದಿಸಿದೆ.

2021ರಲ್ಲಿ ರೆಮ್ಡಿಸಿವಿರ್ ಔಷಧದಲ್ಲಿ ಎಂಡೋಟಾಕ್ಸಿನ್ ಬ್ಯಾಕ್ಟೀರಿಯಾದ ಕುರುಹುಗಳು ಕಂಡು ಬಂದಿದ್ದರಿಂದ, ಆ ಬ್ಯಾಚ್ ನ ರೆಮ್ಡಿಸಿವಿರ್ ಔಷಧವನ್ನು ಬಿಹಾರ ಔಷಧ ನಿಯಂತ್ರಕರು ಗುಣಮಟ್ಟ ಪಾಲನೆ ಮಾಡಲಾಗಿಲ್ಲ ಎಂದು ಘೋಷಿಸಿದ್ದರು. ಈ ಔಷಧ ಸೇವನೆಯಿಂದ ಹಲವಾರು ರೋಗಿಗಳು ಪ್ರತಿಕೂಲ ಪರಿಣಾಮ ಎದುರಿಸಿದ್ದರು ಎಂದು ವರದಿಯಾಗಿತ್ತು.

4. ಗ್ಲೇನ್ ಮಾರ್ಕ್: 2022-23ರ ನಡುವೆ ಈ ಸಂಸ್ಥೆಯು ಕಳಪೆ ಔಷಧಿಗಾಗಿ ಐದು ನೋಟಿಸ್ ಗಳನ್ನು ಸ್ವೀಕರಿಸಿತ್ತು. ಈ ಪೈಕಿ ನಾಲ್ಕು ನೋಟಿಸ್‍ ಗಳನ್ನು ಮಹಾರಾಷ್ಟ್ರ ಆಹಾರ ಮತ್ತು ಔಷಧಗಳು ಆಡಳಿತ ಸಂಸ್ಥೆಯು ನೀಡಿತ್ತು. ಈ ಸಂಸ್ಥೆಯು ತಯಾರಿಸಿದ್ದ ರಕ್ತದೊತ್ತಡ ನಿಯಂತ್ರಿಸುವ ಟೆಲ್ಮಾ ಔಷಧವು ಕಳಪೆಯಾಗಿದ್ದು, ಕರಗುವ ಪರೀಕ್ಷೆಯಲ್ಲಿ ವಿಫಲವಾಗಿದೆ ಎಂದು ಹೇಳಲಾಗಿತ್ತು. ನಂತರ ಈ ಸಂಸ್ಥೆಯು ನವೆಂಬರ್ 2022ರಲ್ಲಿ ರೂ. 9.75 ಕೋಟಿ ರೂ. ಮೊತ್ತದ ಚುನಾವಣಾ ಬಾಂಡ್ ಗಳನ್ನು ಖರೀದಿಸಿತ್ತು.

5. ಸಿಪ್ಲಾ: 2018ರಿಂದ 2022ರ ನಡುವೆ ಈ ಸಂಸ್ಥೆಗೆ ನಾಲ್ಕು ಶೋಕಾಸ್ ನೋಟಿಸ್ ಗಳನ್ನು ನೀಡಲಾಗಿತ್ತು. ಇದಾದ ನಂತರ, 2019ರಿಂದ ಈ ಸಂಸ್ಥೆಯು ರೂ. 39.2 ಕೋಟಿ ಮೌಲ್ಯದ ಚುನಾವಣಾ ಬಾಂಡ್ ಗಳನ್ನು ಖರೀದಿಸಿದೆ.

6. ಐಪಿಸಿಎ ಲ್ಯಾಬೊರೇಟರೀಸ್ ಲಿಮಿಟೆಡ್: ಈ ಸಂಸ್ಥೆಯು ನವೆಂಬರ್ 2022ರಿಂದ ಅಕ್ಟೋಬರ್ 2023ರ ನಡುವೆ ರೂ. 13.5 ಕೋಟಿ ಮೌಲ್ಯದ ಚುನಾವಣಾ ಬಾಂಡ್ ಗಳನ್ನು ಖರೀದಿಸಿದೆ. ಅಕ್ಟೋಬರ್ 2018ರಿಂದ ಈ ಸಂಸ್ಥೆಯು ತಯಾರಿಸುವ ಮಲೇರಿಯಾ ನಿರೋಧಕ ಔಷಧ ಲ್ಯಾರಿಯಾಗೊದಲ್ಲಿ ಕ್ಲೋರೋಕ್ವಿನ್ ಫಾಸ್ಫೇಟ್ ಪ್ರಮಾಣವು ನಿಗದಿತ ಪ್ರಮಾಣಕ್ಕಿಂತ ಕಡಿಮೆ ಇರುವುದು ಪತ್ತೆಯಾಗಿತ್ತು ಹಾಗೂ ಈ ಔಷಧವನ್ನು ಕಳಪೆ ಎಂದು ಘೋಷಿಸಲಾಗಿತ್ತು.

7. ಇಂಟಾಸ್ ಫಾರ್ಮಾಸ್ಯೂಟಿಕಲ್: ಅಕ್ಟೋಬರ್ 2022ರಲ್ಲಿ ಈ ಸಂಸ್ಥೆಯು 20 ಕೋಟಿ‌ ರೂ. ಮೌಲ್ಯದ ಚುನಾವಣಾ ಬಾಂಡ್ ಗಳನ್ನು ಖರೀದಿಸಿತ್ತು. ಈ ಸಂಸ್ಥೆ ತಯಾರಿಸುವ ಎನಾಪ್ರಿಲ್-5 ಮಾತ್ರೆಯು ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ ಸಂಸ್ಥೆಯು ನಡೆಸಿದ್ದ ಕರಗುವ ಪರೀಕ್ಷೆಯಲ್ಲಿ ವಿಫಲವಾಗಿತ್ತು.

ಕೃಪೆ: thenewsminute.com

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News